ಜಿಲ್ಲೆ

ಸಕ್ಕರೆ ಕಾರ್ಖಾನೆ ಪುನರಾರಂಭಿಸುವ ಉದ್ದೇಶವಿದೆಯೇ

ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ವಾಣಿವಿಲಾಸ ಸಕ್ಕರೆ ಕಾರ್ಖಾನೆ ಮುಚ್ಚಲ್ಪಟ್ಟಿದ್ದು, ಅದನ್ನು ಪುನರಾರಂಭಿಸುವ ಉದ್ದೇಶ ಸರ್ಕಾರಕ್ಕೆ ಇದೆಯೇ ಎಂದು ಎಂಎಲ್ಸಿ ಕೆ.ಎಸ್.ನವೀನ್ ರಾಜ್ಯ ಸರ್ಕಾರಕ್ಕೆ ಪ್ರಶ್ನಿಸಿದ್ದಾರೆ.

ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಮಂಗಳವಾರ ಚುಕ್ಕೆ ಗುರುತಿನ ಪ್ರಶ್ನೆ ವೇಳೆ ವಿಷಯ ಪ್ರಸ್ತಾಪಿಸಿರುವ ಅವರು, ಕೋಟ್ಯಂತರ ಮೌಲ್ಯವಿರುವ ನೂರಾರು ಎಕರೆ ಜಮೀನಿನಲ್ಲಿ ಈ ಕಾರ್ಖಾನೆ ಇದ್ದು, ಭದ್ರಾ ಮೇಲ್ದಂಡೆ ಯೋಜನೆ ಮೂಲಕ ಇಲ್ಲಿಗೆ ನೀರು ಕೂಡ ಹರಿದು ಬರಲಿದೆ. ಹೀಗಾಗಿ ಈ ಸಹಕಾರಿ ಸಂಸ್ಥೆ ಪುನಶ್ಚೇತನಗೊಳಿಸುವ ಯೋಜನೆ ಕುರಿತು ಕೈಗೊಂಡ ಕ್ರಮಗಳ ಮಾಹಿತಿ ನೀಡುವಂತೆ ಒತ್ತಾಯಿಸಿದ್ದಾರೆ.

ಈ ಕಾರ್ಖಾನೆಯೂ 1961ರಲ್ಲಿ ಸಹಕಾರ ಕ್ಷೇತ್ರದಡಿ ನೋಂದಣಿಯಾಗಿ 1250 ಟಿಸಿಡಿ ಕಬ್ಬು ಅರೆಯುವ ಸಾಮರ್ಥ್ಯ ಹೊಂದಿದೆ. ದುಡಿಯುವ ಬಂಡವಾಳ ಮತ್ತು ಕಬ್ಬಿನ ಕೊರತೆ ಕಾರಣಕ್ಕೆ 2003-04ರಲ್ಲಿ ಕಾರ್ಯ ಸ್ಥಗಿತಗೊಳಿಸಿದೆ ಎಂದು ಸಕ್ಕರೆ ಸಚಿವ ಶಿವಾನಂದ ಎಸ್ ಪಾಟೀಲ ತಿಳಿಸಿದ್ದಾರೆ.

ಪುನಶ್ಚೇತನ ಸಂಬಂಧ ಗುತ್ತಿಗೆ ನೀಡುವ ಸರ್ಕಾರದ ಪ್ರಯತ್ನ ಈ ಹಿಂದೆ ಯಶಸ್ವಿಯಾಗಿಲ್ಲ. 2013ರಲ್ಲಿ ಸಮಾಪನಗೊಳಿಸಿ, ಅಧಿಕಾರಿ ನೇಮಿಸಲಾಗಿದೆ. 270 ಎಕರೆ ಜಮೀನು ಹೊಂದಿದ್ದು, ಕಾರ್ಖಾನೆ ಪುನರಾರಂಭಿಸಲು ಜನಪ್ರತಿನಿಧಿಗಳು, ರೈತ ಮುಖಂಡರು, ಸಾರ್ವಜನಿಕರಿಂದ ಮನವಿ ಸ್ವೀಕರಿಸಲಾಗಿದೆ. ಈ ಕುರಿತು ಟೆಕ್ನೊ ಎಕನಾಮಿಕ್ ಫೆಸಿಬಿಲಿಟಿ ವರದಿ ಪಡೆದು ಸಾಧಕ-ಬಾಧಕ ಚರ್ಚಿಸಿ ನಿಯಮಾನುಸಾರ ಪರಿಶೀಲಿಸಲಾಗುವುದು ಎಂದು ತಿಳಿಸಿದ್ದಾರೆ.