ಜಿಲ್ಲೆ

ಸಕ್ಕರೆ ಕಾಯಿಲೆ ಬಗ್ಗೆ ಭಯ ಬೇಡ: ಡಾ. ಪದ್ಮಪ್ರಸಾದ್

ಹಾಸನ: ಸಕ್ಕರೆ ಕಾಯಿಲೆ ಇರುವವರು ಭಯ ಪಡುವುದು ಬೇಡ. ವೈದ್ಯರಿಂದ ಸೂಕ್ತ ತಪಾಸಣೆ ಮಾಡಿಸಿಕೊಂಡು ಅವರ ಸಲಹೆ ಸೂಚನೆಗಳನ್ನು ಸರಿಯಾಗಿ ಪಾಲಿಸಿದರೆ ರೋಗವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು ಎಂದು ವೈದ್ಯರಾದ ಡಾ. ಪದ್ಮಪ್ರಸಾದ್ ತಿಳಿಸಿದರು.

ನಗರದ ಬಿ.ಎಂ. ರಸ್ತೆ, ಕುವೆಂಪು ನಗರದಲ್ಲಿರುವ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಬಿಪಿ ಹಾಗೂ ಸಕ್ಕರೆ ಕಾಯಿಲೆ ರೋಗದ ಬಗ್ಗೆ ಉಪನ್ಯಾಸ ನೀಡಿದ ಅವರು, ಮಧುಮೇಹದ ಆರಂಭಿಕ ಲಕ್ಷಣಗಳು ಹೆಚ್ಚಿನ ಜನರಿಗೆ ಗೊತ್ತಾಗಿ ಬಿಡುತ್ತವೆ ಎಂದು ನೀವು ಭಾವಿಸಬಹುದು. ದುರಾದೃಷ್ಟವಶಾತ್ ಮಧುಮೇಹವು ಆರಂಭದಲ್ಲಿರುವಾಗ ನೀಡುವ ಸೂಚನೆಗಳು ಸ್ಪಷ್ಟವಾಗಿದ್ದರೂ ಇದನ್ನು ಬೇರೆ ತೊಂದರೆ ಎಂದು ಹೆಚ್ಚಿನವರು ಇದನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ ಎಂದರು.

ಕುಡಿಯುವ ನೀರು ಪೂರ್ಣ ದೇಹಕ್ಕೆ ಹೋಗಿ ಕಿಡ್ನಿಯಲ್ಲಿ ಸಕ್ಕರೆಯಾಗಿ ಪರಿವರ್ತನೆ ಆಗುತ್ತದೆ. ಸಕ್ಕರೆ ಕಾಯಿಲೆ ಇರುವರಿಗೆ ಸಾಮಾನ್ಯವಾಗಿ ಬಿಪಿ ಬಂದೇ ಬರುತ್ತದೆ. ಆದರೆ ಬಿಪಿ ಇರುವವರಿಗೆ ಶುಗರ್ ಬರಬೇಕು ಎಂದೇನಿಲ್ಲ. ಸಕ್ಕರೆ ಕಾಯಿಲೆ ಶೇಕಡವಾರು ಹೆಚ್ಚಿನ ಪ್ರಮಾಣ ಅನುವಂಶಿಯವಾಗಿ ಬರುತ್ತದೆ. ಶೇ.20ರಷ್ಟು ಹಾಲ್ಕೊಹಾಲ್‌ನಿಂದ ಬರುತ್ತದೆ. ಸಕ್ಕರೆ ಕಾಯಿಲೆ ಇರುವವರು ನಡಿಗೆ, ಯೋಗಾಸನ ಮಾಡಬೇಕು. ಬೆಳಗಿನ ಜಾವ ಅನ್ನ ತಿನ್ನಬಾರದು. ಪ್ರತಿ ಆಹಾರವನ್ನು ನಿಯಮಿತವಾಗಿ ಬಳಸಬೇಕು. ರಾತ್ರಿ ವೇಳೆ ರಾಗಿ ಮತ್ತು ಅನ್ನವನ್ನು ಕಡಿಮೆ ತಿನ್ನಬೇಕು. ಪ್ರತಿ ಕಾಯಿಲೆಯಲ್ಲೂ ಡಯಟ್ ವಿಭಿನ್ನವಾಗಿರುತ್ತದೆ. ಕಿಡ್ನಿ ಸಮಸ್ಯೆ ಇರುವವರು ಕೆಲ ಪದಾರ್ಥಗಳ ತಿನ್ನುವುದನ್ನು ನಿಯಂತ್ರಿಸಬೇಕು. ಕಾಯಿಲೆ ಬಂದಾಗ ತಪ್ಪು ಕಲ್ಪನೆಯಿಂದ ಅತಿಯಾಗಿ ದೇಹ ದಂಡನೆ ಮಾಡುವುದು ಒಳ್ಳೆಯದಲ್ಲ ಎಂದು ಕಿವಿಮಾತು ಹೇಳಿದರು.

ಹೆಚ್ಚೆಚ್ಚು ಮೂತ್ರ ವಿಸರ್ಜನೆ ಮಾಡುವುದು ಮಧುಮೇಹದ ಆರಂಭದ ಲಕ್ಷಣ. ಇದರ ಜತೆಗೆ ಆಯಾಸವಾಗುವುದು, ತ್ವಚೆಯ ಬಣ್ಣದಲ್ಲಿ ಬದಲಾವಣೆ, ಗಾಯವಾದರೆ ಮಾಗಲು ಹೆಚ್ಚು ಸಮಯ ತೆಗೆದುಕೊಳ್ಳುವುದು, ದೃಷ್ಟಿ ದೋಷ ಸೇರಿಂತೆ ಹಲವು ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಗುರುತಿಸಿ ತಜ್ಞರ ಸಲಹೆ ಪಡೆಯುವ ಮೂಲಕ ಮಧುಮೇಹ ಪೂರ್ಣವಾಗಿ ಆವರಿಸುವುದನ್ನು ಆದಷ್ಟೂ ಮಟ್ಟಿಗೆ ತಡವಾಗಿಸಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಲಯನ್ಸ್ ಸೇವಾ ಸಂಸ್ಥೆ (ಕ್ಲಬ್) ಬಿ.ಎಸ್. ಸೋಮಶೇಖರ್, ಕಾರ್ಯದರ್ಶಿ ಐ.ಜಿ. ರಮೇಶ್, ಖಜಾಂಚಿ ಮಂಜಪ್ಪ, ಪ್ರಾಂತೀಯ ಅಧ್ಯಕ್ಷ ಎಚ್.ಆರ್. ಚಂದ್ರೇಗೌಡ, ಮಾಜಿ ಅಧ್ಯಕ್ಷ ಎಸ್.ಪಿ. ಪ್ರಕಾಶ್, ಮಾಜಿ ಗೌವರ್ನರ್ ಬಿ.ವಿ. ಹೆಗ್ಡೆ, ಮಂಜುನಾಥ್ ಮೂರ್ತಿ, ನಾಗೇಶ್ ಇತರರು ಇದ್ದರು.