ಹೊಳೆಹೊನ್ನೂರು: ಸಹಕಾರ ಸಂಘಗಳಿಗೆ ಷೇರುದಾರರು ಸಕಾಲದಲ್ಲಿ ಸಾಲ ಮರುಪಾವತಿ ಮಾಡಿದರೆ ಸಂಘಗಳು ಪ್ರಗತಿ ಸಾಧಿಸುತ್ತವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ಸೋಮವಾರ ಆಗರದಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿ, ಸಹಕಾರ ಸಂಘಗಳಿಂದ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ದೊರೆಯುತ್ತಿದೆ. ರೈತರು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ಸಹಕಾರ ಸಂಘಗಳಲ್ಲಿ ಚಿನ್ನ ಹಾಗೂ ಅಡಕೆ ಅಡಮಾನ ಸಾಲ ದೊರೆಯುವುದರಿಂದ ರೈತರು ಆರ್ಥಿಕವಾಗಿ ಸುಧಾರಿಸಿಕೊಳ್ಳಲು ಸಹಕಾರಿ. ಸಕಾಲದಲ್ಲಿ ರೈತರು ಸಾಲ ಮರುಪಾವತಿ ಮಾಡಿ ಸಂಘದ ಏಳಿಗೆಗೆ ಶ್ರಮಿಸಬೇಕು. ಸಹಕಾರ ಸಂಘಗಳ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ. ಉಚಿತ ಕಾರ್ಯಕ್ರಮಗಳು ಎಲ್ಲರಿಗೂ ತಲುಪಿವೆ. ಪ್ರಸ್ತುತ ಆಗರದಹಳ್ಳಿ ಸಹಕಾರ ಸಂಘದಿಂದ 9 ಕೋಟಿ ರೂ. ಸಾಲ ನೀಡಿದ್ದು, ಮುಂಬರುವ ದಿನಗಳಲ್ಲಿ ಸಾಲ ನೀಡಿಕೆ ಪ್ರಮಾಣ 100 ಕೋಟಿ ರೂ. ತಲುಪಬೇಕು ಎಂದು ಹೇಳಿದರು. ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಹನುಮಂತು ಮಾತನಾಡಿ, ಸಹಕಾರ ಸಂಘದಲ್ಲಿ 935 ಷೇರುದಾರರು ಇದ್ದು, ತಡಸ, ಅಗರದಹಳ್ಳಿ, ಬಸವಪುರ, ಸಿದ್ದರಕಾಲನಿ, ಹಂಚಿನ ಸಿದ್ದಾಪುರ, ದೊಡ್ಡಸಿಗೆ ಹಾಗೂ ಕೆಂಗಾನಲ್ ಗ್ರಾಮಗಳನ್ನು ಒಳಗೊಂಡು ಸಂಘ ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಸಹಕಾರದಿಂದ 55 ಲಕ್ಷ ರೂ. ಸಾಲ ಪಡೆದು ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಧಾನ್ಯ ಬೆಳೆಗಳ ಸಂಸ್ಕರಣಾ ಘಟಕ ಹಾಗೂ ತೋಟೋತ್ಪನ್ನ ಧಾನ್ಯಗಳ ಶೇಖರಣೆಗೆ ಕಟ್ಟಡ ನಿರ್ಮಿಸಲಾಗಿದೆ ಎಂದರು. ಸಂಘದ ಅಧ್ಯಕ್ಷ ಹನುಮಂತು, ಉಪಾಧ್ಯಕ್ಷ ಎಸ್.ರುದ್ರೇಶ್, ಮಾಜಿ ಎಂಎಲ್‌ಸಿ ಆರ್.ಪ್ರಸನ್ನಕುಮಾರ್, ರೈತ ಸಂಘದ ರಾಜ್ಯಾಧ್ಯಕ್ಷ ಎಚ್.ಆರ್ ಬಸವರಾಜಪ್ಪ, ಮಾಜಿ ಎಂಎಲ್‌ಸಿ ಆಯನೂರು ಮಂಜುನಾಥ್, ಎಚ್.ಎಲ್.ಷಡಾಕ್ಷರಿ, ಎಚ್.ಎನ್.ನಾಗರಾಜ್, ಶಿವಕುಮಾರ್, ಶ್ರೀನಿವಾಸ್ ಕರಿಯಣ್ಣ, ಟಿ.ಆರ್.ಕೃಷ್ಣೋಜಿ ರಾವ್, ಸಿದ್ದಪ್ಪ ಗೌಡ, ನಾಗರಾಜ್ ಗೌಡ, ಬಸವರಾಜಪ್ಪ ಇತರರಿದ್ದರು.
ಪ್ರತಿಯೊಬ್ಬರೂ ಸಹಕಾರ ಸಂಘದಲ್ಲಿ ವ್ಯವಹರಿಸಬೇಕು. ಕಡಿಮೆ ಬಡ್ಡಿದರದ ಸಾಲ ಸೌಲಭ್ಯವನ್ನು ಬಳಸಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು. ಹಣಕಾಸು ವ್ಯವಹಾರಗಳಲ್ಲಿ ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಬೇಕು. ಷೇರುದಾರರ ಹೆಚ್ಚಳಕ್ಕೆ ಶ್ರಮಿಸಲಾಗುತ್ತಿದೆ. ಸಿ.ಹನುಮಂತು ಹೊಳೆಹೊನ್ನೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ