ಜಿಲ್ಲೆ

ಸಕಾಲದಲ್ಲಿ ಪರಿಹಾರ ಒದಗಿಸಿ

ಯಾದಗಿರಿ: ನೆರೆ ಮತ್ತು ಮಳೆಯಿಂದಾಗಿ ಮತಕ್ಷೇತ್ರದ ಗ್ರಾಮೀಣ ಭಾಗದಲ್ಲಿ ಸಾಕಷ್ಟು ಹಾನಿಯಾಗಿದ್ದು, ಅಧಿಕಾರಿಗಳು ಸಂತ್ರಸ್ತರಿಗೆ ಸಕಾಲದಲ್ಲಿ ಪರಿಹಾರ ಒದಗಿಸಲು ಶ್ರಮಿಸಬೇಕು ಎಂದು ಶಾಸಕ ನಾಗನಗೌಡ ಕಂದಕೂರ ಸೂಚನೆ ನೀಡಿದರು.

ತಾಲೂಕಿನ ಲಿಂಗೇರಿ, ಕೌಳೂರು, ಸಾವೂರ ಮತ್ತು ಮಲ್ಹಾರ ಗ್ರಾಮಗಳಿಗೆ ಗುರುವಾರದಂದು ಭೇಟಿ ನೀಡಿ ಭಾರಿ ಮಳೆ ಮತ್ತು ಭೀಮಾ ನದಿ ಪ್ರವಾಹದಿಂದ ಹಾನಿಗೀಡಾದ ಪ್ರದೇಶವನ್ನು ಪರಿಶೀಲಿಸಿದ ಅವರು, ಅಧಿಕಾರಿಗಳಿಗೆ ಕಟ್ಟುನಿಟ್ಟಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ತಮ್ಮ ಕ್ಷೇತ್ರದಲ್ಲಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದಲ್ಲದೇ ಮನೆಯಲ್ಲಿದ್ದ ದವಸ ಧಾನ್ಯಗಳು ನೀರು ಪಾಲಾಗಿದೆ ಎಂದರು.

ಪ್ರವಾಹದಿಂದ ಮನೆಗಳಿಗೆ ನೀರು ನುಗ್ಗಿದೆ. ಹಾಗೂ ಜಮೀನಿನಲ್ಲಿನ ಬೆಳೆಗಳೆಲ್ಲ ಸಂಪೂರ್ಣ ನಾಶವಾಗಿವೆ. ಕ್ಷೇತ್ರದಲ್ಲಿನ ಸಮಸ್ಯೆಯ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಹೆಚ್ಚಿನ ಪರಿಹಾರ ನೀಡಲು ಮನವಿ ಮಾಡಿಕೊಳ್ಳುವುದಾಗಿ ತಿಳಿಸಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಕೃಷಿ ಇಲಾಖೆ ಅಧಿಕಾರಿಗಳು, ಮುಖಂಡರಾದ ಮಲ್ಲಣ್ಣಗೌಡ ಕೌಳೂರ, ಶಿವುಗೌಡ ಕೌಳೂರು, ವೆಂಕಟರಡ್ಡಿ, ನಿಂಗಣಗೌಡ, ಬಂದಪ್ಪಗೌಡ ಲಿಂಗೇರಿ, ಸಿದ್ರಾಮಪ್ಪ, ಗಂಗಾಧರ, ಮಹಿಪಾಲರಡ್ಡಿ ಮಲ್ಹಾರ, ವೆಂಕಟರಡ್ಡಿ ಮಲ್ಹಾರ , ಶರಣಗೌಡ ಕಾರಡ್ಡಿ, ಸಿದ್ದಲಿಂಗರೆಡ್ಡಿ ಮಲ್ಹಾರ, ಆಂಜನೇಯ , ಹನಮಂತ ಇಸ್ಲಾಕರ, ಶರಣಗೌಡ ಸಾವೂರ, ವೀರೇಶ ಕಡೇಚೂರ, ಅಪ್ಪು ಮಲ್ಹಾರ ಇದ್ದರು.