ಚಿಕ್ಕಮಗಳೂರು ಡಿಸಿ ಕಚೇರಿ ಆವರಣದ ಕೆಸ್ವಾನ್‌ ಸಭಾಂಗಣದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಹೊರ ತಂದಿರುವ ೨೦೨೩-೨೪ನೇ ಸಾಲಿನ ಜಿಲ್ಲಾ ಅಂಕಿ-ಅಂಶಗಳ ನೋಟ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅವಲೋಕನ ಪುಸ್ತಕವನ್ನು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಬಿಡುಗಡೆ ಮಾಡಿದರು.  
ಜಿಲ್ಲೆ

ಸಕಾಲದಲ್ಲಿ ಜನನ-ಮರಣ ಮಾಹಿತಿ ನೋಂದಣಿಗೆ ಕ್ರಮ ವಹಿಸಿ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಜನನ-ಮರಣಗಳ ವಿವರಗಳನ್ನು ನಿಗದಿತ ಸಮಯದೊಳಗೆ ನೋಂದಣಿಗೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್.ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದ ಕೆಸ್ವಾನ್‌ನಲ್ಲಿ ನಿನ್ನೆ ಜನನ-ಮರಣಗಳ ನಾಗರಿಕ ನೋಂದಣಿಯ ತ್ರೈಮಾಸಿಕ ಜಿಲ್ಲಾಮಟ್ಟದ ಸಮನ್ವಯ ಸಮಿತಿ ಹಾಗೂ ಜಿಲ್ಲಾ ಮಟ್ಟದ ಕೃಷಿ ಅಂಕಿ-ಅಂಶಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈ ಜನ್ಮ ತಂತ್ರಾಂಶದಲ್ಲಿ ಯಾವುದೇ ಜನನ ಮತ್ತು ಮರಣ ಘಟನೆ ನಡೆದ ೨೧ ದಿನಗಳ ಒಳಗಾಗಿ ಕಡ್ಡಾಯವಾಗಿ ಸಂಬಂಧಿಸಿದ ನೋಂದಣಾಧಿಕಾರಿಗಳು ನೋಂದಣಿಯನ್ನು ಮಾಡಬೇಕು. ನೋಂದಣಿ ಮಾಡದೆ ಸಾರ್ವಜನಿಕರಿಗೆ ತೊಂದರೆಯಾದಲ್ಲಿ ಸಂಬಂಧಿಸಿದ ನೋಂದಣಾಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದರು. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಆರ್.ಶಿವಕುಮಾರ್ ಸಭೆಗೆ ಮಾಹಿತಿ ನೀಡಿ, ಜನನ-ಮರಣ ಸಂಭವಿಸಿದ ೨೧ ದಿನಗಳ ನಂತರ ೩೦ ದಿನಗಳ ಅವಧಿಯೊಳಗಿನ ಘಟನೆಯ ತಡ ನೋಂದಣಿಗೆ ಶುಲ್ಕ ರೂ. ೨೦ ಸಂದಾಯದ ನಂತರ ನೋಂದಣಿ ಮಾಡಬೇಕು. ಒಂದು ತಿಂಗಳ ನಂತರ ಒಂದು ವರ್ಷದ ಘಟನೆಗಳನ್ನು ಸಂಬಂಧಿಸಿದ ಗ್ರಾಮ ಆಡಳಿತಾಧಿಕಾರಿ ಮತ್ತು ರಾಜಸ್ವ ನಿರೀಕ್ಷಕರ ಮಹಜರು ವರದಿಯೊಂದಿಗೆ ತಹಸೀಲ್ದಾರರ ಆದೇಶದ ಮೂಲಕ ಗ್ರಾಮ ಆಡಳಿತಾಧಿಕಾರಿಗಳಿಗೆ ನೋಂದಣಿಗೆ ಅವಕಾಶ ನೀಡಲಾಗಿದೆ. ಒಂದು ವರ್ಷದ ನಂತರದ ಯಾವುದೇ ಜನನ-ಮರಣ ಘಟನೆಗಳು ಹಾಗೂ ಹೆಸರು ಸೇರ್ಪಡೆಯನ್ನು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ನೀಡಿ ನೋಂದಣಿ ಮಾಡಿಕೊಳ್ಳಬೇಕು ಎಂದರು. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭಿಮಾ ಯೋಜನೆಯಡಿ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ಬೆಳ ಕಟಾವು ಪ್ರಯೋಗಗಳನ್ನು ನಿಯಮಾನುಸಾರ ಕೈಗೊಳ್ಳಲು ಹಾಗೂ ಯಾವುದೇ ಪ್ರಯೋಗಗಳು ನಷ್ಟವಾಗದಂತೆ ನೋಡಿಕೊಳ್ಳಬೇಕು. ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸುವಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅನುಷ್ಠಾನಾಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾ ಸಂಖ್ಯಾ ಸಂಗ್ರಹಣಾ ಇಲಾಖೆ ಹೊರ ತಂದಿರುವ ೨೦೨೩-೨೪ನೇ ಸಾಲಿನ ಜಿಲ್ಲಾ ಅಂಕಿ-ಅಂಶಗಳ ನೋಟ ಮತ್ತು ಸಾಮಾಜಿಕ ಮತ್ತು ಆರ್ಥಿಕ ಅವಲೋಕನ ಪುಸ್ತಕವನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು. ಸಭೆಯಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ದೇವರಾಜ್, ಚಿಕ್ಕಮಗಳೂರು ತಾಲೂಕು ತಹಸೀಲ್ದಾರ್ ರೇಷ್ಮಾಶೆಟ್ಟಿ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಬಿ.ಕೆ.ವಿಜಯಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್ಥಬಾಬು, ಡಿವೈಎಸ್‌ಪಿ ಶೈಲೇಂದ್ರ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.