ಚಿಕ್ಕಬಳ್ಳಾಪುರ: ನಿಗದಿತ ಕಾಲಮಿತಿಯೊಳಗೆ ಸಾರ್ವಜನಿಕ ಅರ್ಜಿಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಸಕಾಲ ಯೋಜನೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಹ್ಯಾಟ್ರಿಕ್ ಪ್ರಥಮ ಸ್ಥಾನದ ಸಾಧನೆಯನ್ನು ಜಿಲ್ಲೆ ತೋರಿದೆ. 2022ನೇ ಮಾರ್ಚ್‌ನ ಪ್ರಗತಿಯ ರ‌್ಯಾಂಕಿಂಗ್ ಬಿಡುಗಡೆಯಾಗಿದ್ದು, ಚಿಕ್ಕಬಳ್ಳಾಪುರಕ್ಕೆ ಪ್ರಥಮ ಸ್ಥಾನ ಸಿಕ್ಕಿದೆ.
ಕಳೆದ ಜನವರಿ ಮತ್ತು ೆಬ್ರವರಿಯಲ್ಲೂ ಮೊದಲ ಸ್ಥಾನದಲ್ಲಿದ್ದು, ಹ್ಯಾಟ್ರಿಕ್ ಸಾಧನೆಯಾಗಿದೆ. ಮತ್ತೊಂದೆಡೆ ಯೋಜನೆ ಅನುಷ್ಠಾನಕ್ಕೆ ಬಂದ 2012ರಿಂದ ಇಲ್ಲಿಯವರೆಗೆ ಜಿಲ್ಲೆಯು ರಾಜ್ಯದಲ್ಲಿಯೇ 49 ಬಾರಿ ಪ್ರಥಮ ಸ್ಥಾನ ಗಳಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ. ಜಿಲ್ಲೆಯಲ್ಲಿ ಮಾರ್ಚ್‌ನಲ್ಲಿ 81,842 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿ, ಹೊಸ ಮತ್ತು ಬಾಕಿ ಉಳಿದಿರುವ ಅರ್ಜಿಗಳು ಸೇರಿ 92,786 ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ಇತ್ಯರ್ಥಪಡಿಸಲಾಗಿದೆ. 4,699 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಹಿನ್ನೆಲೆಯಲ್ಲಿ ತಿರಸ್ಕೃತಗೊಂಡಿವೆ. 2,165 ಅರ್ಜಿಗಳು ವಿಲೇವಾರಿ ಬಾಕಿಯಿದೆ.
ಇನ್ನು 2021 ರಿಂದ ಇಲ್ಲಿಯವರೆಗಿನ ಸಾಧನೆಗೆ ಸಂಬಂಧಿಸಿದಂತೆ 22,63,257 ಅರ್ಜಿಗಳನ್ನು ಸ್ವೀಕರಿಸಿ 22,44,040 ಅರ್ಜಿಗಳನ್ನು (ಶೇ.99.15ರ ಸರಾಸರಿಯಲ್ಲಿ) ವಿಲೇವಾರಿಗೊಳಿಸಲಾಗಿದೆ. 49 ಬಾರಿ ಪ್ರಥಮ, 14 ಬಾರಿ ದ್ವಿತೀಯ ಹಾಗೂ 10 ಬಾರಿ ತೃತೀಯ ಸ್ಥಾನ ಗಳಿಸಿದೆ. ಜಿಲ್ಲೆಯು ಪ್ರಥಮ ಸ್ಥಾನ ಗಳಿಕೆಯಲ್ಲಿ ರಾಜ್ಯದಲ್ಲಿಯೇ ಜಿಲ್ಲಾವಾರು ದಾಖಲೆಯಾಗಿದೆ.
ನಿಗದಿತ ಕಾಲಮಿತಿಯೊಳಗೆ ಅರ್ಜಿಗಳು ವಿಲೇವಾರಿಯಾಗುವುದರಿಂದ ಜನರು ಸರ್ಕಾರಿ ಕಚೇರಿಗಳಿಗೆ ಪದೇ ಪದೆ ಅಲೆಯುವುದು ತಪ್ಪುತ್ತದೆ. ಜತೆಗೆ ಪಾರದರ್ಶಕ ಆಡಳಿತ ವ್ಯವಸ್ಥೆಗೆ ಸಹಕಾರಿ.
ದಶಮಾನೋತ್ಸವದಲ್ಲಿ ಪ್ರಶಂಸೆ: ಬೆಂಗಳೂರಿನಲ್ಲಿ ಸೋಮವಾರ ಕೈಗೊಂಡಿದ್ದ ರಾಜ್ಯ ಮಟ್ಟದ ಸಕಾಲ ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸಾಧನೆಯ ಪ್ರಶಂಸಾ ಪತ್ರ ನೀಡಿ, ಮೆಚ್ಚುಗೆ ವ್ಯಕ್ತಪಡಿಸಲಾಗಿದೆ. ಹಿಂದೆ ಸಕಾಲ ಯೋಜನೆಯ ಗಮನಾರ್ಹ ಸಾಧನೆಯ ಹಿನ್ನೆಲೆಯಲ್ಲಿ ರಾಜ್ಯ ಮಟ್ಟದಲ್ಲಿ 4 ಬಾರಿ ಪ್ರಶಂಸೆ ಪತ್ರ ಪಡೆದಿರುವ ಕೀರ್ತಿಯು ಜಿಲ್ಲೆಗೆ ದಕ್ಕಿದೆ.
ಜಿಲ್ಲೆಯು ನಿರಂತರವಾಗಿ ಸಕಾಲದಲ್ಲಿ ದಾಖಲೆಯ ಸಾಧನೆಯ ತೋರುತ್ತಿರುವುದು ಶ್ಲಾಘನೀಯ. ಇದಕ್ಕೆ ಎಲ್ಲರ ಪರಿಶ್ರಮ ಮತ್ತು ಸಹಕಾರ ಮುಖ್ಯ ಕಾರಣ. ಮುಂಬರುವ ದಿನಗಳಲ್ಲೂ ಉತ್ತಮ ಕಾರ್ಯ ನಿರ್ವಹಣೆಯಿಂದ ಪ್ರಥಮ ಸ್ಥಾನ ಗಳಿಸಲು ಶ್ರಮಿಸಲಾಗುವುದು. ಆರ್.ಲತಾ, ಜಿಲ್ಲಾಧಿಕಾರಿ, ಚಿಕ್ಕಬಳ್ಳಾಪುರ