ಬೆಳಗಾವಿ: ಸಕಾಲ ಯೋಜನೆಯು 2012ರ ಏ.2ರಂದು ಪ್ರಾರಂಭಗೊಂಡು, 2022ರ ಏ.2ಕ್ಕೆ 10 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ, ತಾಲೂಕು ಆಡಳಿತದಿಂದ ಡಿಸಿ ಕಚೇರಿ ಆವರಣದಲ್ಲಿ ಸಕಾಲ ದಶಮಾನೋತ್ಸವ ಮೆರವಣಿಗೆ ಮಾಡಲಾಯಿತು. ಯೋಜನೆ ಕುರಿತು ಜನರಿಗೆ ಅರಿವು ಮೂಡಿಸಲಾಯಿತು.
ಬೆಳಗಾವಿ ಜಿಲ್ಲೆಯಲ್ಲಿ ಸಕಾಲದ ಪ್ರಗತಿಯ ಕುರಿತು ಗ್ರೇಡ್-2 ತಹಸೀಲ್ದಾರ್ ಮೋಹನ ಹಾಗೂ ಸಕಾಲ ಜಿಲ್ಲಾ ಸಮಾಲೋಚಕ ಗುರುರಾಜ ಉಪ್ಪಿನ ಅವರು ಸಕಾಲ ವಿಲೇವಾರಿಗಳ ಕುರಿತು ವಿವರಣೆ ನೀಡಿದರು. ಪ್ರಾರಂಭದಲ್ಲಿ 11 ಇಲಾಖೆಗಳಲ್ಲಿ 115 ಸೇವೆಗಳನ್ನು ನಾಗರಿಕರಿಗೆ ಒದಗಿಸಲಾಗುತ್ತಿತ್ತು. ಈಗ 99 ಇಲಾಖೆಗಳಲ್ಲಿ 1,115 ಸೇವೆಗಳನ್ನು ನಾಗರಿಕರಿಗೆ ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸಕಾಲ ಅನುಷ್ಠಾನ: ಜಿಲ್ಲೆಯಲ್ಲಿ ಸಕಾಲ ಅಧಿನಿಯಮಕ್ಕೆ ಒಳಪಡುವ ಎಲ್ಲ ಇಲಾಖೆಗೆ ಸಂಬಂಧಿಸಿದಂತೆ ಏ.2021ರಿಂದ ಮಾ. 2022ರ ವರೆಗೆ 19,35,307 ಅರ್ಜಿ ಸ್ವೀಕರಿಸಿದ್ದು, 19,03,792 ಅರ್ಜಿ ವಿಲೇವಾರಿ ಮಾಡಲಾಗಿದೆ. ವಿಲೇವಾರಿ ಪ್ರಮಾಣ ಶೇ.98.17 ಇದೆ. ಜಿಲ್ಲೆಯಲ್ಲಿ ಸಕಾಲ ಅಧಿನಿಯಮಕ್ಕೆ ಒಳಪಡುವ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಏ.2021 ರಿಂದ ಮಾ.2022ರ ವರೆಗೆ 10,30,542 ಅರ್ಜಿ ಸ್ವೀಕರಿಸಿದ್ದು, 10,21,942 ಅರ್ಜಿ ವಿಲೇವಾರಿ ಮಾಡಲಾಗಿದ್ದು, ವಿಲೇವಾರಿ ಪ್ರಮಾಣ ಶೇ. 99.17ಆಗಿದೆ. ವಿವಿಧ ಇಲಾಖೆಗಳ ಮುಖ್ಯಾಧಿಕಾರಿಗಳು, ಸಕಾಲ ಜಿಲ್ಲಾ ಸಮಾಲೋಚಕರನ್ನೊಳಗೊಂಡಂತೆ ಸಕಾಲ ಸಮನ್ವಯ ಸಮಿತಿ ರಚಿಸಿ ಅಪರ
ಜಿಲ್ಲಾಧಿಕಾರಿಗಳನ್ನು ಸಕಾಲ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಎಲ್ಲ ಇಲಾಖೆಗಳ ಸಕಾಲ ನೋಡಲ್ ಅಧಿಕಾರಿಗಳಿಗೆ ಒಟ್ಟು 14 ಸಕಾಲ ಸಮನ್ವಯ ಸಮಿತಿ ಸಭೆಗಳನ್ನು ಆಯೋಜಿಸಿ, ಎಲ್ಲ ಇಲಾಖೆಗಳ ಪ್ರಗತಿ ಪರಿಶೀಲಿಸಿ, ನಿಗದಿತ ಸಮಯದಲ್ಲಿ ವಿಲೇವಾರಿ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.