ಜಿಲ್ಲೆ

ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಿ

ಮೈಸೂರು: ಶಿಕ್ಷಣವು ಪ್ರತಿಯೊಬ್ಬರಲ್ಲಿ ಸುಪ್ತವಾಗಿ ಅಡಗಿರುವ ಶಕ್ತಿ, ಸಾಮರ್ಥ್ಯ, ಪ್ರತಿಭೆಯನ್ನು ಅರಳಿಸುವ ಸಾಧನ ಎಂದು ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಎಸ್.ಪಿ.ಷಡಾಕ್ಷರಿಸ್ವಾಮಿ ಹೇಳಿದರು.


ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಸ್ನಾತಕೋತ್ತರ ವಿಭಾಗದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶಿಕ್ಷಣವು ವಿದ್ಯಾರ್ಥಿಗಳನ್ನು ಅಧ್ಯಯನಶೀಲರನ್ನಾಗಿ ಮಾಡಬೇಕು. ಜತೆಗೆ, ಕಲಿಕಾ ಪರಿಸರವೂ ವ್ಯಕ್ತಿಯನ್ನು ರೂಪಿಸುವಲ್ಲಿ ಮುಖ್ಯವಾಗುತ್ತದೆ ಎಂದರು.
ಕನಸುಗಳಿಲ್ಲದೆ ಜೀವನ ಸಾಧನೆಯ ಕಡೆಗೆ ಹೋಗಲಾರದು. ಕನಸು ದೊಡ್ಡದಾಗಿರಬೇಕು. ಜತೆಗೆ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳು ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಬೇಕು. ಸದಾ ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕು. ನಕಾರಾತ್ಮಕ ಚಿಂತನೆಗಳಿಂದ ಹಾಗೂ ಅವುಗಳನ್ನು ಹೊಂದಿರುವವರಿಂದ ದೂರವಿರಬೇಕು ಎಂದು ಕಿವಿಮಾತು ಹೇಳಿದರು.


ವಾಗ್ಮಿ ಪ್ರೊ.ಎಂ. ಕೃಷ್ಣೇಗೌಡ ಮಾತನಾಡಿ, ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ದೈಹಿಕ, ಮಾನಸಿಕ ಆರೋಗ್ಯವನ್ನು ಕಾಪಾಡುತ್ತವೆ. ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು ಎಂದರು.


ಕಲಿಕೆಯ ಹಂತದಲ್ಲಿ ವಿದ್ಯಾರ್ಥಿಗಳು ಪಠ್ಯಕ್ಕೆ ಮಾತ್ರವೇ ಸೀಮಿತವಾಗಬಾರದು. ವಿದ್ಯಾರ್ಥಿಗಳಿಗೆ ದೈಹಿಕ, ಮಾನಸಿಕ, ಸಾಮಾಜಿಕ ಹಾಗೂ ಆಧ್ಯಾತ್ಮಿಕ ಆರೋಗ್ಯವೂ ಅಗತ್ಯವಾಗಿದೆ ಎಂದರು.


ವಿದ್ಯಾರ್ಥಿಗಳ ಕನಸು ದೂರದೃಷ್ಟಿವುಳ್ಳದ್ದು, ಹಿರಿದಾದದ್ದು ಆಗಿರಬೇಕು. ಪ್ರಾಪಂಚಿಕ ಜ್ಞಾನ ಸಂಪಾದನೆ ಈಗ ಬಲು ಸುಲಭ. ಜಗತ್ತು ಇಂದು ನಮ್ಮ ಅಂಗೈಯಲ್ಲೇ ಇದೆ. ನಾವು ನಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವುದಕ್ಕೆ ನಮ್ಮ ಮೊಬೈಲು ಫೋನ್ ಅನ್ನು ಕ್ರಮಬದ್ಧವಾಗಿ ಬಳಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


ಕಾಲ ಕಳೆದಂತೆ ಶಿಕ್ಷಣದ ದೃಷ್ಟಿಕೋನವೂ ಬದಲಾಗಿದೆ. ಮುಂದಿನ ದಿನಗಳಲ್ಲಿ ಕೌಶಲ ಉಳ್ಳವರಿಗೆ, ಪ್ರತಿಭಾನ್ವಿತರಿಗೆ ಗುರಿ ಮುಟ್ಟಲು ಹೆಚ್ಚು ಸಮಯ ಬೇಕಿಲ್ಲ. ಶಿಕ್ಷಣ ಸದೃಢವಾಗಿದ್ದರೆ ಜ್ಞಾನ, ಕೌಶಲ ಸೂಕ್ತವಾಗಿದ್ದರೆ ಅವಕಾಶಗಳು ನೀವಿರುವಲ್ಲಿಗೇ ಹುಡುಕಿ ಬರುತ್ತವೆ ಎಂದು ತಿಳಿಸಿದರು.


ಕಾಲೇಜು ಸಮುಚ್ಚಯದ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಸಾಧನೆಗೆ ಬಡತನ, ಆರ್ಥಿಕ ಸ್ಥಿತಿಗತಿಗಳು ಕಾರಣವಾಗಲಾರವು. ದೃಢ ನಿರ್ಧಾರ, ಸಾಧಿಸುವ ಛಲ ಮುಖ್ಯವಾಗಿದೆ. ರಜನಿಕಾಂತ್, ಅಂಬಾನಿ, ಎಂ.ಎಸ್.ಧೋನಿ, ಸಚಿನ್ ತೆಂಡೂಲ್ಕರ್, ಅಕ್ಷಯ್ ಕುಮಾರ್ ಅವರಂತಹವರು ಶ್ರಮಪಟ್ಟು ಸಾಧಕರಾಗಿದ್ದಾರೆ ಎಂದು ಉದಾಹರಣೆಯೊಂದಿಗೆ ವಿವರಿಸಿದರು.


ಸನ್ಮಾನ: ಅಗ್ನಿವೀರ ಯೋಜನೆಯಡಿ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಕಾಲೇಜಿನ ವಿದ್ಯಾರ್ಥಿಗಳಾದ ವಿಕ್ರಮ್ ನಾಯಕ್, ಸಾತ್ವಿಕ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸಾಂಸ್ಕೃತಿಕ, ಕ್ರೀಡೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.


ಪ್ರಾಂಶುಪಾಲೆ ಡಾ. ಎಸ್.ಪ್ರತಿಭಾ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಎಂ.ಪಿ.ಸೋಮಶೇಖರ್, ಕ್ರೀಡಾ ವೇದಿಕೆ ಸಂಚಾಲಕ ಎಂ. ಕಾರ್ತಿಕ್ ಇದ್ದರು.