ಕಮಲನಗರ: ನಮ್ಮ ಜೀವನದಲ್ಲಿ ಅನೇಕ ದ್ವಂದ್ವಗಳಿವೆ. ಜೀವನ ಬೇಸರವಾಗುವಷ್ಟು ವಿಷಮ ಪರಿಸ್ಥಿತಿಗಳು ಎದುರಾಗುತ್ತವೆ. ವಚನಗಳ ಅಧ್ಯಯನದಿಂದ ಶರಣರ ದರ್ಶನ ಲಭಿಸುತ್ತದೆ. ಅಧ್ಯಾತ್ಮ ಮತ್ತು ಲೌಕಿಕಗಳ ಸಮನ್ವಯ ದರ್ಶನವಾಗುತ್ತದೆ. ನಕಾರಾತ್ಮಕ ಚಿಂತನೆಗಳನ್ನು ಹೋಗಲಾಡಿಸಿ, ಚೈತನ್ಯದ ಚಿಲುಮೆಯನ್ನು ಹೊತ್ತಿಸುವುದೇ ಪ್ರವಚನದ ಉದ್ದೇಶ ಎಂದು ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಹೇಳಿದರು.
ಪಟ್ಟಣದ ಡಾ.ಚನ್ನಬಸವ ಪಟ್ಟದ್ದೇವರ ಸ್ಮಾರಕ ಭವನದಲ್ಲಿ ಗುರುವಾರ ಸಂಜೆ ಶ್ರಾವಣ ಮಾಸದ ನಿಮಿತ್ತ ಹಮ್ಮಿಕೊಂಡಿರುವ ಒಂದು ತಿಂಗಳವರೆಗೆ ನಡೆಯುವ ಶರಣರ ಜೀವನ ದರ್ಶನ ಪ್ರವಚನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವವಚನ ನೀಡಿದ ಅವರು, ಶರಣರ, ಸಂತರ, ದಾರ್ಶನಿಕರ ನುಡಿಗಳು ಕತ್ತಲ ಮನೆಗೆ ದೀವಟಿಗಳಂತೆ. ಶರಣರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಅವುಗಳು ನಂದಾದೀಪದಂತೆ ನಮ್ಮ ಬದುಕನ್ನು ಬೆಳಗುತ್ತವೆ ಎಂದರು.
ಪ್ರಾಂಶುಪಾಲ ಶಿವಾಜಿ ಆರ್.ಎಚ್ ವಿಶೇಷ ಉಪನ್ಯಾಸ ನೀಡಿ, ಇಷ್ಟಲಿಂಗ ಪೂಜೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗಿ ಏಕಾಗ್ರತೆ ಹೆಚ್ಚುತ್ತದೆ. ಇಷ್ಟಲಿಂಗ ಪೂಜೆಯಿಂದ ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯಿಂದ ಮೆಲಾಟಿನಿನ್ ದ್ರವ ಸ್ರವಿಸಿ ದೇಹದಲ್ಲಿ ಆನಂದದ ಅನುಭವ ನೀಡುತ್ತದೆ. ಮನುಷ್ಯನ ಆಯುಷ್ಯ ಹೆಚ್ಚುತ್ತದೆ. ಇಷ್ಟಲಿಂಗವನ್ನು ಎಲ್ಲ ಧರ್ಮೀಯರೂ ಪೂಜಿಸಬಹುದು ಎಂದು ತಿಳಿಸಿದರು.
ಪ್ರವಚನಕಾರ ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಪ್ರಭುಲಿಂಗ ಸ್ವಾಮೀಜಿ ಮಾನತಾಡಿದರು. ಪ್ರವಚನ ಸೇವಾ ಸಮಿತಿ ಅಧ್ಯಕ್ಷ ಹಾವಗಿರಾವ ಟೊಣ್ಣೆ ಅಧ್ಯಕ್ಷತೆ ವಹಿಸಿದ್ದರು. ಶರಣ ರಾಚಪ್ಪ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು.
ಪ್ರಕಾಶ ಮಾನಕರಿ, ಧನರಾಜ ಸೊಲ್ಲಾಪುರೆ, ಸುಭಾಷ ಮಿರ್ಚೆ, ಸಂಗಮೇಶ ಟೊಣ್ಣೆ, ಮಹಾದೇವ ಬಿರಾದಾರ, ರಾಮೇಶ್ವರ ಶಿವಣಕರ, ರಾಜಕುಮಾರ ಬಿರಾದಾರ, ಶಿವಶರಣಪ್ಪ ಚಿಕಮುರ್ಗೆ, ಅಮರ ಶಿವಣಕರ, ಅವಿನಾಶ ಶಿವಣಕರ, ಸುರೇಶ ಸೊಲ್ಲಾಪುರೆ, ಮಹಾದೇವ ಬಿರಾದಾರ, ಅಜಿತ್ ರಾಗಾ, ಶಾಮರಾವ ಬಿರಾದಾರ ಇತರರಿದ್ದರು.
ಮಡಿವಾಳಪ್ಪ ಮಹಾಜನ ಸ್ವಾಗತಿಸಿದರು. ಪ್ರಭುರಾವ ಕಳಸೆ ನಿರೂಪಣೆ ಮಾಡಿದರು. ಶಾಲಾ ಮಕ್ಕಳು ವಚನ ನೃತ್ಯ ಪ್ರದರ್ಶಿಸಿದರು.
ಹೊಟ್ಟೆ ಹಸಿದವನಿಗೆ ಅನ್ನವನಿಕ್ಕುವವನು, ಬಾಯಾರಿದವನಿಗೆ ನೀರು ಕೊಡುವವನಲ್ಲಿ ದೇವರನ್ನು ಕಾಣಬೇಕು. ಅದನ್ನು ಬಿಟ್ಟು ಕಲ್ಲು ನಾಗರಕ್ಕೆ ಹಾಲೆರೆಯುವುದು ಅವೈಜ್ಞಾನಿಕ. ಇದನ್ನು ೧೨ನೇ ಶತಮಾನದಲ್ಲೇ ಶರಣರು ತೀವ್ರವಾಗಿ ಖಂಡಿಸಿದ್ದಾರೆ.
| ಶ್ರೀ ಗುರುಬಸವ ಪಟ್ಟದ್ದೇವರು, ಪೀಠಾಧಿಪತಿ ಭಾಲ್ಕಿ ಹಿರೇಮಠ ಸಂಸ್ಥಾನ