ಅರಸೀಕೆರೆ: ಸಾತ್ವಿಕ ಮೌಲ್ಯ ಪ್ರತಿಬಿಂಬಿಸುವ ಸಕಾರಾತ್ಮಕ ಚಿಂತನೆಗಳು ಬದುಕಿಗೆ ಪ್ರೇರಣೆಯಾಗಲಿವೆ ಎಂಬುದನ್ನು ವಿದ್ಯಾರ್ಥಿಗಳು ಮರೆಯಬಾರದು ಎಂದು ಕದಳಿ ವೇದಿಕೆ ರಾಜ್ಯ ಸಂಚಾಲಕಿ ಹಾಗೂ ಸಾಹಿತಿ ಸುಶೀಲಾ ಸೋಮಶೇಖರ್ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ತಾಲೂಕು ಶರಣ ಸಾಹಿತ್ಯ ಪರಿಷತ್ ವತಿಯಿಂದ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಹನ್ನೆರಡನೇ ಶತಮಾನದ ಬಸವಾದಿ ಶಿವಶರಣರು ನುಡಿದಂತೆ ನಡೆಯುವ ಮೂಲಕ ಜೀವನದ ಸಾರ್ಥಕತೆ ಕಂಡುಕೊಂಡಿದ್ದರು. ತಮ್ಮನ್ನು ತಾವು ಪರಸ್ಪರ ಒರೆೆ ಹಚ್ಚಿಕೊಂಡು ಕಾದ ಕುಲುಮೆಯಲ್ಲಿ ಬೆಂದು ಬಂದ ಅಪ್ಪಟ ಚಿನ್ನದಂತೆ ಹೊರಹೊಮ್ಮಿದ್ದರು ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ವಚನಕಾರರ ವಚನಗಳು ಕೇವಲ ಮಾತುಗಳಲ್ಲ, ಮಂತ್ರಗಳಾಗಿದ್ದವು. ಶೈಕ್ಷಣಿಕ, ಸಾಮಾಜಿಕ, ಕೃಷಿ ಸೇರಿ ಎಲ್ಲ ಜೀವನಾನುಭಗಳನ್ನು ಮೈಗೂಡಿಸಿಕೊಂಡಿದ್ದ ಅಂದಿನ ವಚನಕಾರರ 22 ಸಾವಿರ ವಚನಗಳು ಲಭ್ಯವಾಗಿವೆ ಎಂಬುದು ಸಾಮಾನ್ಯ ಸಂಗತಿಯಲ್ಲ ಎಂಬುದನ್ನು ನಾವು ಮರೆಯಬಾರದು. ಅಂತಹ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಿದರೆ ಬದುಕು ಹಸನಾಗಲಿದೆ ಎಂದು ಹಲವು ನಿದರ್ಶನಗಳ ಸಹಿತ ವಿವರಿಸಿದರು.
ಹಿರಿಯ ಪ್ರಾಧ್ಯಾಪಕಿ ಎಚ್.ಪಿ.ಉಷಾ ಮಾತನಾಡಿದರು. ಕಾಲೇಜು ಪ್ರಾಂಶುಪಾಲ ಡಾ.ಎಸ್.ನಾರಾಯಣ್, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಶೇಖರ್ ಸಂಕೋಡನಹಳ್ಳಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಡಾ.ಹರೀಶ್ ಕುಮಾರ್, ಪ್ರಾಧ್ಯಾಪಕರಾದ ನಾಗರಾಜ್, ಸುಬ್ರಮಣ್ಯ, ಯೋಗಣ್ಣ, ಭಾಸ್ಕರ್, ಗ್ರಂಥಪಾಲಕ ಮಂಜುನಾಥ್ ಪಾಲ್ಗೊಂಡಿದ್ದರು.