ಸಕಲೇಶಪುರ: ತಾಲೂಕಿನಲ್ಲಿ ಮಳೆ ನಿಂತರೂ ಹಾನಿ ನಿಲ್ಲದಾಗಿದ್ದು ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿದ್ದು ಹತ್ತಾರು ಎಕರೆ ಜಮೀನು ನಾಶವಾಗಿದೆ.
ಕಳೆದ ಹದಿನೈದು ದಿನಗಳಿಂದ ಎಡೆಬಿಡದೆ ಸುರಿದ ಮಳೆ ಶುಕ್ರವಾರ ಅಲ್ಪ ಬಿಡುವು ನೀಡಿದ್ದು ಆಗೊಮ್ಮೆ ಈಗೋಮ್ಮೆ ಸೂರ್ಯ ದರ್ಶನ ನೀಡುತ್ತಿದ್ದ ಪರಿಣಾಮ ಜನರ ನೆಮ್ಮದಿಗೆ ಕಾರಣವಾಗಿತ್ತು. ಆದರೆ, ತಾಲೂಕಿನ ಹಲವೆಡೆ ಭೂಕುಸಿತ ಸಂಭವಿಸಿದ್ದು ಹಲವರ ಬದುಕು ಬೀದಿಗೆ ಬಂದಿದೆ.
ಗುರುವಾರ ರಾತ್ರಿ ಅರೆಕೆರೆ ಗ್ರಾಮದ ಪಾಲೇಶ್ ಎಂಬುವವರಿಗೆ ಸೇರಿದ ಎರಡು ಎಕರೆ ಕಾಫಿ ತೋಟ ಭೂಕುಸಿತದಿಂದ ಸಂಪೂರ್ಣ ನಾಶವಾಗಿದ್ದು ತೋಟದ ಮಣ್ಣು ಸುಮಾರು 10 ಎಕರೆ ನಾಟಿಮಾಡಿದ ಭತ್ತದ ಗದ್ದೆಗಳ ಮೇಲೆ ಹರಡಿರುವುದರಿಂದ ಭತ್ತದ ಗದ್ದೆಗಳು ನಾಶವಾಗಿವೆ. ಇವರ ಕುಟುಂಬಕ್ಕೆ ಆಸರೆಯಾಗಿದ್ದ ಸುಮಾರು 30 ವರ್ಷದ ಕಾಫಿ ತೋಟ ನಾಶವಾಗಿರುವುದರಿಂದ ಅಕ್ಷರಶಃ ಈ ಕುಟುಂಬ ಬೀದಿಗೆ ಬಂದಿದೆ.
ಇದಲ್ಲದೆ, ಹಾನುಬಾಳು ಹೋಬಳಿಯಲ್ಲಿ ಹರಿಯುವ ಕಿತ್ತನಹಳ್ಳ ಹಲವೆಡೆ ಜಮೀನಿನ ಮೇಲೆ ಹರಿದು ಅಪಾರ ಪ್ರಮಾಣದ ನಷ್ಟ ಉಂಟುಮಾಡಿದ್ದು ರೈತರು ಮತ್ತೊಮ್ಮೆ ನಾಟಿ ಮಾಡುವಂತಹ ಪರಿಸ್ಥಿತಿ ನಿರ್ಮಿಸಿದೆ. ದೋಣಿಗಾಲ್ ಗ್ರಾಮದ ಈರಯ್ಯ ಕೂಲಿಮಾಡಿ ಕಳೆದ ಐದು ವರ್ಷದಿಂದ ಮಾಡಿದ್ದ 1.5 ಎಕರೆ ಕಾಫಿ, ಏಲಕ್ಕಿ, ಅಡಿಕೆ ತೋಟ ಸಹ ಭೂಕುಸಿತದಿಂದ ನಾಮಾವಶೇಷವಾಗಿದ್ದು ದಂಪತಿ ಕಣ್ಣೀರು ಕಟುಕರ ಹೃದಯವನ್ನು ಒಡೆಯುವಂತಿತ್ತು.
ಕೊಗರಹಳ್ಳಿ ಗ್ರಾಮದ ಯಶೋಧ ಎಂಬುವರ ವಾಸದ ಮನೆ ಮೇಲೆ ಮರ ಬಿದ್ದು ಮನೆಯ ಗೋಡೆ ಜಖಂಗೊಂಡಿದೆ. ಇದಲ್ಲದೆ ಅತಿಯಾದ ಮಳೆ ಹಾಗೂ ಗಾಯಿಂದ ತಾಲೂಕಿನ ಶೇ. 70 ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಿದ್ದು ಜನರು ಸಂಕಷ್ಟದಲ್ಲಿ ಜೀವನ ನಡೆಸುವಂತಾಗಿದೆ.