ಸಕಲೇಶಪುರ: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮೀಸಲು ಕ್ಷೇತ್ರವಾಗಿರುವ ಸಕಲೇಶಪುರ ವಿಧಾನಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಪ್ರಬಲ ಆಕಾಂಕ್ಷಿ ಆಗಿರುವ ಸಿಮೆಂಟ್ ಮಂಜು ವಿರುದ್ಧ ಕ್ಷೇತ್ರ ಒಕ್ಕಲಿಗರು ಸಿಡಿದೆದ್ದಿದ್ದಾರೆ.
ಹೌದು ತನ್ನ ಹಾವಭಾವ, ವರ್ತನೆ ಹಾಗೂ ಮಾತಿನ ಶೈಲಿಯಿಂದಾಗಿ ಟೀಕೆಗೆ ಒಳಗಾಗುತ್ತಿರುವ ಸಿಮೆಂಟ್ ಮಂಜು ಹಲವು ಬಾರಿ ಪಕ್ಷದ ಹಿರಿಯರಿಂದ ಬುದ್ಧಿ ಹೇಳಿಸಿಕೊಂಡಿದ್ದಾರೆ. ಆದರೂ ತಮ್ಮ ವರ್ತನೆ ಸರಿಪಡಿಸಿಕೊಳ್ಳದಿರುವುದು ಈ ಬೆಳವಣಿಗೆಗೆ ಸಾಕ್ಷಿ.
ಘಟನೆ: ಎರಡು ದಿನಗಳ ಹಿಂದೆ ಬೇಲೂರು ತಾಲೂಕು ಆರೇಹಳ್ಳಿ ಹೋಬಳಿಯ ರೆಸಾರ್ಟ್ ಒಂದರಲ್ಲಿ ಸಕಲೇಶಪುರ ಬಿಜೆಪಿ ಮಂಡಲದ ಕೋರ್ ಕಮಿಟಿ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್, ‘ಪಕ್ಷದ ಟಿಕೆಟ್ ಆಕಾಂಕ್ಷಿಯಾದ ನಾರ್ವೆ ಸೋಮಶೇಖರ್ ಅವರು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರೊಂದಿಗೆ ಹೆಚ್ಚಿನ ಒಡನಾಟ ಇಟ್ಟುಕೊಂಡಿದ್ದಾರೆ. ಬಿಜೆಪಿ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಮತ್ತೊಬ್ಬ ಆಕಾಂಕ್ಷಿ ಸಿಮೆಂಟ್ ಮಂಜು ಸಹ ತಮ್ಮದೇ ಪಡೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಇಬ್ಬರು ಆಕಾಂಕ್ಷಿಗಳು ತಮಗೆ ಇಷ್ಟಬಂದ ರೀತಿ ನಡೆದುಕೊಂಡರೆ ಪಕ್ಷದ ಕಾರ್ಯಕರ್ತರನ್ನು ಒಟ್ಟಾಗಿ ಕರೆದುಕೊಂಡು ಹೋಗುವವರು ಯಾರು’ ಎಂಬುದಾಗಿ ಪ್ರಶ್ನಿಸಿದರು.
‘ಸಿಮೆಂಟ್ ಮಂಜು ಅವರು ಅರಕಲಗೂಡು ತಾಲೂಕಿನಿಂದ ಬಂದಿರುವವರು. ನಾರ್ವೆ ಸೋಮಶೇಖರ್ ಬೆಂಗಳೂರಿನವರು. ಸ್ಥಳೀಯವಾಗಿ ಒಬ್ಬ ಪ್ರಬಲ ಅಭ್ಯರ್ಥಿ ಇದ್ದಿದ್ದರೆ ಹೀಗಾಗುತ್ತಿರಲಿಲ್ಲ’ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದರು.
ಮಾಜಿ ಶಾಸಕರ ಮಾತು ಮುಗಿಯುವ ಮುನ್ನವೇ ಎದ್ದು ನಿಂತ ಸಿಮೆಂಟ್ ಮಂಜು ಅವರು ಎಚ್.ಎಂ. ವಿಶ್ವನಾಥ್ ವಿರುದ್ಧ ಏರುದನಿಯಲ್ಲಿ ಮಾತನಾಡುತ್ತಾ, ‘ನನ್ನದ ಕಟ್ಟಾಯ ಹೋಬಳಿ ಶೆಟ್ಟಿಹಳ್ಳಿ ಗ್ರಾಮ. ಈ ಗ್ರಾಮ ಸಕಲೇಶಪುರ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತದೆ. ನನ್ನದು ಅರಕಲಗೂಡು ತಾಲೂಕು ಅಲ್ಲ’ ಎಂದು ಖಾರವಾಗಿ ಉತ್ತರ ನೀಡಿದ್ದಾರೆ. ಸಿಮೆಂಟ್ ಮಂಜು ಮಾತಿನ ಶೈಲಿಗೆ ಬೆಚ್ಚಿದ ಮುಖಂಡರಾದ ಮೈ.ವಿ. ರವಿಶಂಕರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಹುಲ್ಲಹಳ್ಳಿ ಸುರೇಶ್ ಮತ್ತಿತರರು ‘ಇದು ಕೋರ್ ಕಮಿಟಿ ಸಭೆ, ಇಲ್ಲಿ ಜಗಳವಾಡಲು ಯಾರೂ ಬಂದಿಲ್ಲ, ಸುಮ್ಮನೆ ಕುಳಿತುಕೊಳ್ಳಿ. ಎಂಎಲ್‌ಎ ಚುನಾವಣೆ ಆಕಾಂಕ್ಷಿಯಾಗಿರುವವರಿಗೆ ಸಮಾಧಾನ ಅಗತ್ಯ’ ಎಂದು ಗದರುವ ಮೂಲಕ ಸಿಮೆಂಟ್ ಮಂಜು ಅವರನ್ನು ಸುಮ್ಮನಾಗಿಸಿದ್ದಾರೆ.
ಸಿಮೆಂಟ್ ಮಂಜು ಅವರ ವರ್ತನೆಯಿಂದ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರಲ್ಲಿ ಒಂದು ರೀತಿ ಅವಮಾನಕ್ಕೀಡಾದ ಭಾವನೆ ಮೂಡಿದೆ. ಸಭೆಯಲ್ಲಿದ್ದ ಎಚ್.ಎಂ. ವಿಶ್ವನಾಥ್ ಬೆಂಬಲಿಗರಲ್ಲೂ ಅಸಮಾಧಾನ ಹುಟ್ಟಿಕೊಳ್ಳಲು ಕಾರಣವಾಗಿದೆ. ಸಭೆಯ ನಂತರ ಚರ್ಚೆ ನಡೆಸಿದ ಎಚ್.ಎಂ ವಿಶ್ವನಾಥ್ ಮತ್ತು ಒಕ್ಕಲಿಗ ಮುಖಂಡರು, ಇದು ಎಚ್.ಎಂ. ವಿಶ್ವನಾಥ್ ಅವರೊಬ್ಬರಿಗಾದ ಅವಮಾನವಲ್ಲ. ಒಕ್ಕಲಿಗ ಜನಾಂಗಕ್ಕಾದ ಅವಮಾನ ಎಂದು ಅಭಿಪ್ರಾಯಪಟ್ಟರು. ಈ ಬಗ್ಗೆ ಪಕ್ಷಾತೀತವಾಗಿ ಎಲ್ಲ ಒಕ್ಕಲಿಗ ಮುಖಂಡರ ಸಭೆ ಸೇರಿಸಿ ಚರ್ಚೆ ನಡೆಸಲು ತೀರ್ಮಾನಿಸಿದ್ದರು.
ಆದರಂತೆ, ಸಕಲೇಶಪುರದಲ್ಲಿ ಭಾನುವಾರ ಒಕ್ಕಲಿಗ ಮುಖಂಡರ ಸಭೆ ನಡೆದಿದ್ದು, ‘ಸಿಮೆಂಟ್ ಮಂಜು ಶಾಸಕರಾಗುವ ಮುನ್ನವೇ ಈ ರೀತಿ ದರ್ಪ ತೋರುತ್ತಿದ್ದಾರೆ. ಮುಂದೆ ಶಾಸಕರಾದರೆ ಮೇಲ್ವರ್ಗದ ಜನ ಸಂಕಷ್ಟ ಎದುರಿಸುವುದು ನಿಶ್ಚಿತ. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷೃರಾಗಿರುವ ಮಾಜಿ ಶಾಸಕ ಎಚ್.ಎಂ. ವಿಶ್ವನಾಥ್ ಅವರಿಗೆ ಆದ ಅವಮಾನ ಮತ್ತು ಸಿಮೆಂಟ್ ಮಂಜು ದುರಹಂಕಾರ ಖಂಡಿಸಿ ಪ್ರತಿಭಟನೆ ನಡೆಸಬೇಕು’ ಎಂಬುದಾಗಿ ಒಕ್ಕಲಿಗರ ಮುಖಂಡರು ನಿರ್ಧಾರ ಕೈಗೊಂಡಿದ್ದಾರೆ. ಅಲ್ಲದೆ, ಪ್ರತಿಭಟನೆ ದಿನ ನಿಗದಿಪಡಿಸಿ ಸುದ್ದಿಗೋಷ್ಠಿ ಮೂಲಕ ಪ್ರಕಟಿಸುವ ನಿರ್ಣಯವನ್ನೂ ಸಭೆಯಲ್ಲಿ ಕೈಗೊಳ್ಳಲಾಗಿದೆ.
ಸಭೆ ನಡೆಸದಿರಲು ಸೂಚನೆ:
ಸಿಮೆಂಟ್ ಮಂಜು ವರ್ತನೆ ಖಂಡಿಸಿ ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಸಭೆ ನಡೆಸಲು ಎಚ್.ಎಂ. ವಿಶ್ವನಾಥ್ ಬೆಂಬಲಿಗರು ಸಿದ್ಧತೆ ನಡೆಸಿದ್ದಾರೆ ಎಂಬ ಮಾಹಿತಿ ದೊರೆತ ತಕ್ಷಣ ಬಿಜೆಪಿಯ ಜಿಲ್ಲೆ ಮತ್ತು ರಾಜ್ಯ ಮುಖಂಡರು ವಿಶ್ವನಾಥ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಸಭೆ ನಡೆಸದಿರುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ.
ಒಳ ರಾಜಕೀಯ:
ಕಳೆದ ಬಾರಿ ಕೆಲವೇ ಮತಗಳ ಅಂತರದಲ್ಲಿ ಪರಾಭವಗೊಂಡು, ಈಗ ಮತ್ತೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಲು ಪ್ರಬಲ ಆಕಾಂಕ್ಷಿಯಾಗಿರುವ ನಾರ್ವೆ ಸೋಮಶೇಖರ್ ಅವರಿಗೆ ಪಕ್ಷದ ಟಿಕೆಟ್ ಪಡೆಯಲು ಪ್ರಬಲ ಪೈಪೋಟಿ ನೀಡುತ್ತಿರುವ ಸಿಮೆಂಟ್ ಮಂಜು ಅವರನ್ನು ಮಟ್ಟಹಾಕಲು ಈ ಸಣ್ಣ ಘಟನೆಯನ್ನು ದೊಡ್ಡದಾಗಿ ಬಿಂಬಿಸುವ ತಂತ್ರ ನಡೆದಿದೆ. ಈ ಘಟನೆ ಬಳಸಿಕೊಂಡು ಒಂದು ಪ್ರಬಲ ಸಮುದಾಯವನ್ನು ಸಿಮೆಂಟ್ ಮಂಜು ವಿರುದ್ಧ ಎತ್ತಿಕಟ್ಟುವ ಕೆಲಸವನ್ನು ಕಾಣದ ಕೈಗಳು ಮಾಡುತ್ತಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಒಕ್ಕಲಿಗರಲ್ಲದವರು ಸಭೆಯಲ್ಲಿ ಭಾಗಿ:
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಭಾನುವಾರ ನಡೆದ ಸಭೆಗೆ ಒಕ್ಕಲಿಗರಲ್ಲದ ಹಲವರು ಆಗಮಿಸಿದ್ದರು. ಅವರೆಲ್ಲ ಎಚ್.ಎಂ. ವಿಶ್ವನಾಥ್ ಅಭಿಮಾನಿಗಳು. ಆದರೆ, ಸಭೆಯ ಅರ್ಧದಲ್ಲಿ ಎದ್ದು ನಿಂತ ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಮರಗತ್ತೂರು ಉಮೇಶ್ ಅವರು, ‘ಒಕ್ಕಲಿಗರಲ್ಲದವರು ಈ ಸಭೆಯಲ್ಲಿದ್ದರೆ ಎದ್ದು ಹೋಗಿ’ ಎಂದು ಕಡ್ಡಿತುಂಡು ಮಾಡಿದಂತೆ ನುಡಿದರು. ಇದರಿಂದ ಸಭೆಯಲ್ಲಿದ್ದ ಹಲವರು ಮುಜುಗರಕ್ಕೆ ತುತ್ತಾಗಿ ಎದ್ದು ಹೊರನಡೆದರು.
‘‘ವಿಶ್ವಣ್ಣ ನನ್ನ ಗುರುಗಳು. ಕೋರ್ ಕಮಿಟಿ ಸಭೆಯಲ್ಲಿ ನಾನು ಕಟ್ಟಾಯ ಹೋಬಳಿಗೆ ಸೇರಿದವನು ಎಂದು ವಿವರಣೆ ನೀಡಿದೆ. ಆದರೆ ಇದನ್ನೇ ನನ್ನ ರಾಜಕೀಯ ವಿರೋಧಿಗಳು ಅಸ್ತ್ರವನ್ನಾಗಿ ಮಾಡಿಕೊಂಡು ನನ್ನನ್ನು ತುಳಿಯುವ ಕೆಲಸ ಮಾಡುತ್ತಿದ್ದಾರೆ.’’
‘‘ಎಚ್.ಎಂ. ವಿಶ್ವನಾಥ್ ಅವರಿಗೆ ಮಾಡಿರುವ ಅವಮಾನ ಒಕ್ಕಲಿಗ ಸಮಾಜಕ್ಕೆ ಮಾಡಿರುವ ಅವಮಾನವಾಗಿದೆ. ಆದ್ದರಿಂದ, ಪಕ್ಷಾತೀತವಾಗಿ ಅವರಿಗೆ ಬೆಂಬಲ ನೀಡಿ ಸಭೆ ನಡೆಸಿದ್ದೇವೆ.’’