ಸಕಲೇಶಪುರ: ಕ್ಷೇತ್ರದಲ್ಲಿರುವ ಸಮಸ್ಯೆಗಳನ್ನು ಬಗೆಹರಿಸಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದು ಶಾಸಕ ಸಿಮೆಂಟ್ ಮಂಜು ಭರವಸೆ ನೀಡಿದರು.
ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಸಿಮೆಂಟ್ ಮಂಜು ಆಯ್ಕೆಯಾದ ಹಿನ್ನೆಲೆಯಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ವತಿಯಿಂದ ಆಯೋಜಿಸಿದ್ದ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಬ್ರಾಹ್ಮಣರೆಂದರೆ ಬಿಜೆಪಿ ಬಿಜೆಪಿಯೆಂದರೆ ಬ್ರಾಹ್ಮಣರಾಗಿದ್ದು, ಕ್ಷೇತ್ರದ ಬ್ರಾಹ್ಮಣರು ಹೆಚ್ಚಿನ ಸಂಖ್ಯೆಯಲ್ಲಿ ನನ್ನ ಪರ ಮತದಾನ ಮಾಡಿದ್ದಾರೆ.
ಬ್ರಾಹ್ಮಣ ಸಮಾಜದ ಕಟ್ಟಡ ನಿರ್ಮಾಣ ಕಾರ್ಯ ಹಲವು ವರ್ಷಗಳಿಂದ ಪ್ರಗತಿಯಲ್ಲಿದ್ದು, ಮುಂದಿನ ದಿನಗಳಲ್ಲಿ ಶಾಸಕರ ಅನುದಾನವನ್ನು ಸಮುದಾಯ ಭವನ ನಿರ್ಮಾಣಕ್ಕೆ ನೀಡಲು ಮುಂದಾಗುತ್ತೇನೆ. ಪಟ್ಟಣದ ಕೆಲವು ಇಲಾಖೆಗಳಲ್ಲಿ ಕಳೆದ 15 ವರ್ಷಗಳಿಂದ ಭ್ರಷ್ಟಾಚಾರ ಬೇರೂರಿದ್ದು ಮುಂದಿನ ದಿನಗಳಲ್ಲಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸಲು ಪ್ರಾಮಾಣಿಕವಾಗಿ ರಯತ್ನಿಸುವುದಾಗಿ ತಿಳಿಸಿದರು.
ಪುರಸಭಾ ಸದಸ್ಯೆ ಜ್ಯೋತಿ ರಾಜ್‌ಕುಮಾರ್ ಮಾತನಾಡಿ, ಈಗಾಗಲೆ ನನ್ನ ವಾರ್ಡ್‌ನಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲು ಮುಂದಾಗುವುದಾಗಿ ತಿಳಿಸಿದರು.
ತಾಲೂಕು ಬ್ರಾಹ್ಮಣ ಸಮಾಜದ ಅಧ್ಯಕ್ಷ ಶಿವಪ್ರಕಾಶ್ ಧನಾವತ್ ಮಾತನಾಡಿ, ತಾಲೂಕು ಬ್ರಾಹ್ಮಣ ಸಮಾಜಕ್ಕೆ ಹಲವು ವರ್ಷಗಳ ಇತಿಹಾಸವಿದೆ. ಬ್ರಾಹ್ಮಣ ಸಮಾಜದ ಕಟ್ಟಡ ಕಾಮಗಾರಿ ಕೆಲಸ ಹಲವು ಕಾರಣಗಳಿಂದ ಕುಂಠಿತಗೊಂಡಿದೆ. ಈ ನಿಟ್ಟಿನಲ್ಲಿ ಶಾಸಕರು ಮುಂದಿನ ದಿನಗಳಲ್ಲಿ ಸೂಕ್ತ ಅನುದಾನ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು.
ಶಾಸಕ ಸಿಮೆಂಟ್ ಮಂಜುನಾಥ್, ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸಮಾಜದ ಕೊಡುಗೈ ದಾನಿಗಳಾದ ಕೋಗರವಳ್ಳಿ ಶ್ಯಾಮರಾವ್, ಕಾಫಿ ಬೆಳೆಗಾರ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು. ಮಧ್ಯಾಹ್ನದ ನಂತರ ಸಮಾಜದ ಬಂಧುಗಳಿಗಾಗಿ ವಿವಿಧ ಆಟೋಟ ಕಾರ್ಯಕ್ರಮಗಳು ನಡೆದವು.
ಸಂಘದ ಉಪಾಧ್ಯಕ್ಷ ರಘೋತ್ತಮ, ಮಾಜಿ ಕಾರ್ಯದರ್ಶಿ ವೆಂಕಟೇಶ್, ವಿಪ್ರ ಮಹಿಳಾ ಘಟಕದ ಅಧ್ಯಕ್ಷೆ ನಿರ್ಮಲಾ, ಸಮಾಜದ ಮುಖಂಡರಾದ ಮೈಲಾರ್, ರಾಜೀವ್, ಸೋಮೇಶ್, ಕಬ್ಬಿನಗದ್ದೆ ಅನಂತ, ಶ್ರೆಕಾಂತ್, ಸೂರ್ಯನಾರಾಯಣ, ಬಾಲಣ್ಣ , ಕುಮಾರ್, ಬಿಜೆಪಿ ಮುಖಂಡರಾದ ರಾಜ್‌ಕುಮಾರ್, ರಘು ಗೌಡ ಮತ್ತಿತರರು ಹಾಜರಿದ್ದರು.