ಜಿಲ್ಲೆ

ಸಕಲ ಜೀವಿಗಳಿಗೂ ಪರಮಾತ್ಮ ಆಧಾರ

ಚಿತ್ರದುರ್ಗ: ಸಕಲ ಜೀವರಾಶಿಗಳಿಗೂ ಪರಮಾತ್ಮನೆ ಆಧಾರ. ಆತನಿಲ್ಲದೆ, ಯಾವ ಕ್ರಿಯೆಯೂ ನಡೆಯಲಾರದು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀ ಹೇಳಿದರು.

ವಾಸವಿ ವಿದ್ಯಾಸಂಸ್ಥೆ ಆವರಣದಲ್ಲಿ ಹರಿವಾಯು ಗುರು ಸೇವಾ ಟ್ರಸ್ಟ್‌ನಿಂದ ಸೋಮವಾರ ರಾತ್ರಿ ಆರಂಭವಾದ ‘ಹರಿದಾಸ ಹಬ್ಬ-ಸಪ್ತಾಹ’ದಲ್ಲಿ ಆಶೀರ್ವಚನ ನೀಡಿದರು.

ಆಕಾಶದಿಂದ ಬಿದ್ದ ನೀರು ಸಾಗರ ಸೇರಿದಂತೆ, ಮಾನವರು ಸಲ್ಲಿಸುವ ಎಲ್ಲ ಪೂಜಾ ಸೇವೆಗಳು, ಪುನಸ್ಕಾರಗಳು ಭಗವಂತನನ್ನೇ ಸೇರಲಿದೆ. ಕರ್ಮ ಎಂದಿಗೂ ಮನುಷ್ಯರನ್ನು ಬಿಡುವುದಿಲ್ಲ. ಅದನ್ನು ಅನುಭವಿಸಲೇಬೇಕು. ಆದರೆ, ದಾನ-ಧರ್ಮದಂತ ಪುಣ್ಯ ಕಾರ್ಯಗಳ ಮೂಲಕ ತ್ವರಿತವಾಗಿ ಕಳೆದುಕೊಳ್ಳಲು ಸಾಧ್ಯವಿದೆ ಎಂದರು.

ಮಾನವ ಪ್ರತಿಬಿಂಬವಾದರೆ, ಎಲ್ಲರಲ್ಲೂ ಬಿಂಬ ರೂಪದಲ್ಲಿ ಪರಮಾತ್ಮ ಇದ್ದಾನೆ. ದೇವರಲ್ಲಿ ಭಕ್ತಿ, ಗುರು-ಹಿರಿಯರಿಗೆ ಗೌರವ, ಸುಸಂಸ್ಕೃತರನ್ನಾಗಿ ಮಕ್ಕಳನ್ನು ಪಾಲಕರು ಬೆಳೆಸಿದರೆ, ಆ ದೇಶ ಎಲ್ಲ ರೀತಿಯಲ್ಲಿ ಪ್ರಗತಿ ಹೊಂದಲಿದೆ ಎಂದು ಸಲಹೆ ನೀಡಿದರು.

ಇದೇ ವೇಳೆ ಶ್ರೀಗಳಿಗೆ ಪುಷ್ಪನಮನ ಸಲ್ಲಿಸುವ ಮೂಲಕ ಟ್ರಸ್ಟ್‌ನಿಂದ ಗೌರವಿಸಲಾಯಿತು. ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ನಗರಸಭೆ ಸದಸ್ಯ ಜಿ.ಹರೀಶ್, ವಿವಿಧ ಸಂಘ-ಸಂಸ್ಥೆ, ಮಠದ ಪದಾಧಿಕಾರಿಗಳಾದ ಪಿ.ಎಸ್.ಮಂಜುನಾಥ್, ಜಗದೀಶ್ ಜೆ.ಅಯ್ಯಂಗಾರ್, ಸ್ವಾಮಿನಾಥ್, ಎಲ್.ಇ.ಶ್ರೀನಿವಾಸ್ ಬಾಬು, ಪ್ರಾಣೇಶಾಚಾರ್ಯ ಕೊಪ್ಪರ, ಕಟೀಲ್ ದಿವಾಕರ್, ಚಂದ್ರಪ್ರಕಾಶ್, ಪಿ.ಎನ್.ಮೋಹನ್‌ಕುಮಾರ್ ಗುಪ್ತ, ಉಪಾಧ್ಯ ಪ್ರಭಂಜನಾಚಾರ್ಯ ಕೂಸನೂರು, ಎ.ಶೇಷಗಿರಿರಾವ್, ಡಾ.ಅನಂತರಾಮ್ ಗೌತಮ್, ಎಸ್.ಎನ್.ಲಕ್ಷ್ಮೀಪತಿ, ಎಸ್.ಎ.ಸತ್ಯನಾರಾಯಣಶೆಟ್ಟಿ, ಟ್ರಸ್ಟ್‌ನ ಅಧ್ಯಕ್ಷ ಟಿ.ಕೆ.ನಾಗರಾಜ್, ಕಾರ್ಯದರ್ಶಿ ಜೋಯಿಸ್ ಹುಲಿರಾಜ್, ಸಂಚಾಲಕ ಟಿ.ಎಸ್.ಗೋಪಾಲಕೃಷ್ಣ ಇತರರಿದ್ದರು.