ಬೀರೂರಿನ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಜೆಸಿಐನಿಂದ ಗಿಡ ನೆಡಲಾಯಿತು. ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ, ಎಂ.ಎಲ್.ಮೋಹನ್‌ಕುಮಾರ್, ಸವಿತಾ ರಮೇಶ್ ಇತರರಿದ್ದರು. 
ಜಿಲ್ಲೆ

ಸಕಲ ಜೀವರಾಶಿಗೆ ಪ್ರಕೃತಿ ಆಶ್ರಯ

ಬೀರೂರು: ವಿಶ್ವ ಪರಿಸರ ದಿನವು ಹವಾಮಾನ ಬದಾಲಾವಣೆ, ಮಾಲಿನ್ಯ, ಅರಣ್ಯನಾಶ, ನೀರಿನ ಕೊರತೆಯಂತಹ ತುರ್ತು ಪರಿಸರ ಸಮಸ್ಯೆಗಳ ಬಗ್ಗೆ ಜಾಗತಿಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಎಂದು ಪುರಸಭೆ ಅಧ್ಯಕ್ಷೆ ವನಿತಾ ಮಧು ಬಾವಿಮನೆ ತಿಳಿಸಿದರು.

ಪಟ್ಟಣದ ಲಿಂಗದಹಳ್ಳಿ ರಸ್ತೆಯಲ್ಲಿರುವ ಮಾರ್ಗದ ಮಹದೇವಪ್ಪ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಗಿಡ ನೆಟ್ಟು ಮಾತನಾಡಿ, ಪ್ರಕೃತಿ ನಮಗೆ ಎಲ್ಲ ಸೌಲಭ್ಯಗಳನ್ನೂ ಕಲ್ಪಿಸಿದೆ. ಬದಲಾಗಿ ನಾವು ಪ್ರಕೃತಿ ನಾಶಕ್ಕೆ ಮುಂದಾಗಿರುವುದು ನಾಚಿಕೆಗೇಡು. ಜಾಗತಿಕ ತಾಪಮಾನ ಏರಿಕೆಗೆ ನೇರವಾಗಿ ಪ್ರಕೃತಿ ನಾಶವೇ ಕಾರಣ. ಪ್ರಕೃತಿಯನ್ನು ನಾವು ಕಾಪಾಡದಿದ್ದರೆ ಪ್ರಕೃತಿ ನಮ್ಮನ್ನು ಕಾಪಾಡಲು ಹೇಗೆ ಸಾಧ್ಯ? ಹಾಗೆಯೇ ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದಲೂ ಪ್ರಕೃತಿ ಮೇಲೆ ತೀವ್ರ ರೀತಿಯ ದುಷ್ಪರಿಣಾಮ ಉಂಟಾಗುತ್ತಿದೆ. ಪ್ಲಾಸ್ಟಿಕ್ ತ್ಯಜಿಸಿ, ಪರಿಸರವನ್ನು ಕಾಪಾಡಿ ಎಂದು ತಿಳಿಸಿದರು.

ಬೀರೂರು ಜೆಸಿಐ ಅಧ್ಯಕ್ಷ ಎಂ.ಎಲ್.ಮೋಹನ್‌ಕುಮಾರ್ ಮಾತನಾಡಿ, ಭೂಮಿಯಲ್ಲಿ ಬದುಕಲು ನಮಗಿದ್ದಷ್ಟೇ ಹಕ್ಕು ಎಲ್ಲ ಜೀವ ಸಂಕುಲಗಳಿಗೂ ಇದೆ. ಮನುಷ್ಯ ಸ್ವಾರ್ಥದಿಂದ ಹೊರಬಂದು ಪ್ರಕೃತಿಸ್ನೇಹಿ ಬದುಕನ್ನು ನಿರ್ವಹಿಸಬೇಕು ಎಂದರು.

ಬಿಇಒ ಜಿ.ಆರ್.ರುದ್ರಪ್ಪ ಮಾತನಾಡಿ, ಶಾಲಾ ದಿನಗಳಿಂದಲೇ ಪ್ರಕೃತಿ ಕಾಳಜಿ ಮೂಡಿಸಿದರೆ ಅವರು ಪರಿಸರದ ಜತೆ ಸಹಬಾಳ್ವೆ ನಡೆಸಲು ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಸವಿತಾ ರಮೇಶ್ ಮಾತನಾಡಿದರು. ಪುರಸಭೆ ಸದಸ್ಯೆ ಜ್ಯೋತಿ, ಸದಸ್ಯ ಲಕ್ಷ್ಮಣ್, ಶೇಖರಪ್ಪ, ವೈ.ಟಿ.ಬಾಬು, ಮಾರ್ಗದ ಮಧು, ಮಲ್ಲಿಕಾರ್ಜುನ್, ಸಂದೀಪ್, ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಇದ್ದರು.