ಬೇಲೂರು: ಯಾರೇ ಆಗಲಿ ಸಂಸ್ಥೆಗೆ ಸೇರಿದ ಆಸ್ತಿ ಉಳಿಸುವಂತಹ ಕೆಲಸ ಮಾಡಬೇಕೇ ಹೊರತು, ಸಂಸ್ಥೆಗೆ ದ್ರೋಹ ಮಾಡಿದರೆ ಸಂಸ್ಥೆಯಲ್ಲಿ ಸದಸ್ಯರಾಗುಳಿಯಲು ಅರ್ಹತೆ ಇರುವುದಿಲ್ಲ ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ 2025-26ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು. ಈ ಸಂಸ್ಥೆಗೆ ಸೇರಿದ ನೆಹರು ನಗರದಲ್ಲಿರುವ 4 ಎಕರೆ ಆಸ್ತಿಯನ್ನು ಸುತ್ತಮುತ್ತಲಿನ ಕೆಲವರು ಒತ್ತುವರಿ ಮಾಡಿದ್ದರು. ಅದನ್ನು ತೆರವುಗೊಳಿಸಲು ಹೋದ ಸಂದರ್ಭ ನಮ್ಮ ಮೇಲೆಯೇ ಜೆಸಿಬಿ ದಾಳಿಗೆ ಮುಂದಾದರೂ ನಾವು ಜಗ್ಗಲಿಲ್ಲ. ಕಾರಣ ಅದು ಅತ್ಯಂತ ಬೆಲೆ ಬಾಳುವ ಆಸ್ತಿಯಾಗಿದ್ದು ಒಂದಡಿ ಒತ್ತುವರಿಯಾಗದಂತೆ ಹಿಂದೆಯೇ ಹೋರಾಟ ನಡೆಸಿ ಆಸ್ತಿ ಉಳಿಸಿದ್ದೇವೆ. ಅದೇ ರೀತಿ ಎಲ್ಲರೂ ಸಂಸ್ಥೆಯ ಆಸ್ತಿಯನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕು. ಅದನ್ನು ಬಿಟ್ಟು ವೈಯಕ್ತಿಕ ಹಿತಾಸಕ್ತಿಗಾಗಿ ಸಂಸ್ಥೆಗೆ ದ್ರೋಹ ಬಗೆದರೆ ಅಂತಹ ವ್ಯಕ್ತಿ ಸಂಸ್ಥೆಯಲ್ಲಿರಲು ಅರ್ಹರಲ್ಲ. ಮತ್ತು ಯಾವುದೇ ಸಹಕಾರ ಸಂಸ್ಥೆ ಉಳಿಯಲು ಅಲ್ಲಿನ ಷೇರುದಾರರೇ ಕಾರಣರಾಗುತ್ತಾರೆ. ಅಲ್ಲದೆ ನಮ್ಮ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಸ್ಥೆ ಇಂದು ಉತ್ತಮ ಮಟ್ಟಕ್ಕೆ ಬರಲು ಷೇರುದಾರರ ಸಹಕಾರ ಬಹುಮುಖ್ಯವಾಗಿದೆ. ನಾನು ನಿರ್ದೇಶಕನಾಗಿ ಬಂದ ಸಂದರ್ಭ ಸಂಸ್ಥೆ ದಿವಾಳಿ ಹಂತಕ್ಕೆ ತಲುಪಿತ್ತು. ಆ ಸಂದರ್ಭ ಅಂದಿನ ಆಡಳಿತ ಮಂಡಳಿಯವರೆಲ್ಲ ಸೇರಿ ಸರ್ಕಾರದಿಂದ 10 ಲಕ್ಷ ರೂ.ಷೇರು ಹಣವನ್ನು ಸಂಸ್ಥೆಗೆ ತರುವ ಕೆಲಸವಾಗಿತ್ತು. ನಂತರ ನಿರ್ದೇಶಕರೇ ಸೇರಿ ಸ್ವಂತ ಬಂಡವಾಳ ಹಾಕಿ ಗೊಬ್ಬರ ವ್ಯಾಪಾರ ಪ್ರಾರಂಭಿಸುವ ಜತೆಗೆ ಸಂಸ್ಥೆಯ ವಾಣಿಜ್ಯ ಮಳಿಗೆ ನಿರ್ಮಿಸಿ ಮಳಿಗೆಗಳ ಬಾಡಿಗೆಯನ್ನು ಹಂತ ಹಂತವಾಗಿ ಹೆಚ್ಚು ಮಾಡಿ ಸಂಸ್ಥೆಯನ್ನು ಉತ್ತಮವಾಗಿ ಬೆಳೆಸುವ ಕೆಲಸ ಮಾಡಿದ್ದೇವೆ. ಅದರಂತೆ ಬಂದವರು ಸಂಸ್ಥೆಯನ್ನು ಬೆಳೆಸುವಂತಹ ಕೆಲಸ ಮಾಡಬೇಕು ಎಂದರು.
ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಅಧ್ಯಕ್ಷ ರವಿಕುಮಾರ್ ಮಾತನಾಡಿ, ನಮ್ಮ ಗೋದಾಮಿನಲ್ಲಿ ಗೊಬ್ಬರ ಮಾರಾಟದಲ್ಲಿ ಯಾವುದೇ ದುಬಾರಿ ಬೆಲೆ ಪಡೆಯಲು ನಾವು ಸೂಚಿಸಿಲ್ಲ. ಷೇರುದಾರರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ನಮ್ಮ ಗಮನಕ್ಕೆ ಬಾರದೆ ಆ ರೀತಿ ಘಟನೆ ನಡೆದಿದ್ದರೆ ಕ್ಷಮೆ ಕೇಳುತ್ತೇನೆ. ಸಂಘದ ಆಸ್ತಿ ಉಳಿಸುವ ವಿಚಾರದಲ್ಲಿ ಒಂದು ಅಡಿ ಒತ್ತುವರಿಗೆ ಬಿಡುವುದಿಲ್ಲ. ಈಗಾಗಲೇ ನ್ಯಾಯಾಲಯದಲ್ಲಿ ದೂರು ದಾಖಲಾಗಿದೆ. ಅಲ್ಲಿ ಈ ಬಾರಿ ವಾಣಿಜ್ಯ ಮಳಿಗೆ ನಿರ್ಮಿಸುವ ಉದ್ದೇಶವಿದೆ. ಷೇರುದಾರರ ಹಾಗೂ ನಿರ್ದೇಶಕರ ಮತ್ತು ಸಿಬ್ಬಂದಿಯ ಸಹಕಾರದಿಂದ ಸಂಘ 15 ಲಕ್ಷ ರೂ. ನಿವ್ವಳ ಲಾಭ ಪಡೆದಿದೆ ಎಂದರು. ಸಂಘದ ನಿರ್ದೇಶಕರಾದ ಲಕ್ಷ್ಮಣ್, ಎಸ್.ನಾಗೇಶ್, ಭುವನೇಶ್, ಭಾರತಿಗೌಡ ಮಾತನಾಡಿದರು.
ನಿರ್ದೇಶಕರಾದ ಮಲ್ಲೇಗೌಡ ಸೋಮೇಶ್. ಕುಮಾರ್, ಕಾಂತರಾಜು, ಜಾನಕಮ್ಮ, ಪ್ರಿಯಾಂಕಾ, ತೀರ್ಥಕುಮಾರ್, ಸಿಬ್ಬಂದಿ ದೀಪು, ರಾಧಾ, ಶುಭಾ, ಪ್ರಸನ್ನ ಮತ್ತಿತರರಿದ್ದರು.