ಶಿರಹಟ್ಟಿ: ಜಾನಪದ ಸಾಹಿತ್ಯ ನಮ್ಮ ಸಂಸ್ಕೃತಿಯ ಆಧಾರಸ್ತಂಭ. ಇದು ಪೂರ್ವಜರ ಜೀವನ, ಆಚಾರ-ವಿಚಾರ ಮತ್ತು ಪರಿಸರದ ಬಗ್ಗೆ ಮಾಹಿತಿ ನೀಡುತ್ತದೆ. ಆದರೆ, ಆಧುನಿಕ ಜಗತ್ತಿನಲ್ಲಿ ಈ ಕಲೆಗಳು ಕ್ರಮೇಣ ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಾನಪದ ಸಾಹಿತ್ಯ ಕಲೆಗಳನ್ನು ಉಳಿಸಿ ಬೆಳೆಸುವುದು ಅಗತ್ಯವಾಗಿದೆ ಎಂದು ರಾಜ್ಯ ಜಾನಪದ ಅಕಾಡೆಮಿ ಸದಸ್ಯ ಡಾ. ಜೀವನಸಾಬ್ ವಾಲಿಕಾರ್ ಹೇಳಿದರು.
ಪಟ್ಟಣದ ಶ್ರೀಬೀರೇಶ್ವರ ಸೇವಾ ಸಮಿತಿ ವತಿಯಿಂದ ಬುಧವಾರ ಏರ್ಪಡಿಸಿದ್ದ ಬೀರೇಶ್ವರ ಕಾರ್ತಿಕೋತ್ಸವ ಹಾಗೂ ಯುವ ಸಂಭ್ರಮ ಜಾನಪದ ರಸಮಂಜರಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಜನರಲ್ಲಿ ಜಾನಪದ ಸಾಹಿತ್ಯ, ಕಲೆಗಳ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಮೊದಲ ಹೆಜ್ಜೆ. ಶಾಲಾ-ಕಾಲೇಜು ಮತ್ತಿತರ ವೇದಿಕೆಗಳಲ್ಲಿ ಜಾನಪದ ಕಾರ್ಯಕ್ರಮಗಳನ್ನು ಆಯೋಜನೆ, ಜಾನಪದ ಕಲಾವಿದರಿಗೆ ಪ್ರೋತ್ಸಾಹ ನೀಡುವುದು, ಜಾನಪದ ಸಾಹಿತ್ಯ ಕಲೆಗಳ ಬಗ್ಗೆ ಸಂಶೋಧನೆ ನಡೆಸಿ ದಾಖಲಿಸಬೇಕು. ಸರ್ಕಾರವು ಜಾನಪದ ಸಾಹಿತ್ಯ ಕಲೆಗಳನ್ನು ಉಳಿಸಿ ಬೆಳೆಸಲು ವಿಶೇಷ ಯೋಜನೆಗಳನ್ನು ರೂಪಿಸಬೇಕು. ಜಾನಪದ ಸಾಹಿತ್ಯ ಕಲೆಗಳನ್ನು ಡಿಜಿಟಲೀಕರಣಗೊಳಿಸಿ ಪ್ರಚಾರ ಕೈಗೊಳ್ಳಬೇಕು. ಒಟ್ಟಾಗಿ ಕೆಲಸ ಮಾಡಿದರೆ ಅಮೂಲ್ಯವಾದ ಜಾನಪದ ಸಾಹಿತ್ಯ, ಕಲೆಗಳನ್ನು ಉಳಿಸಿ ಬೆಳೆಸಬಹುದು ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸುಜಾತಾ ದೊಡ್ಡಮನಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಧುನಿಕ ಜೀವನದಲ್ಲಿ ಸದಾ ಒತ್ತಡದಲ್ಲಿರುತ್ತೇವೆ. ಇದರ ನಡುವೆ ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಇಂತಹ ಪರಿಸ್ಥಿತಿಯಲ್ಲಿ ಸಂಸ್ಕಾರ, ಸಂಬಂಧ ಗಟ್ಟಿಗೊಳಿಸಲು ಜನಪದ ಸಾಹಿತ್ಯ ಮತ್ತು ಸಂಗೀತದತ್ತ ಗಮನ ನೀಡಿದರೆ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ ಎಂದರು.
ಮಂಜುನಾಥ್ ಘಂಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ್ ಹಮಗಿ ಅಧ್ಯಕ್ಷತೆ ವಹಿಸಿದ್ದರು. ಪಪಂ ಅಧ್ಯಕ್ಷೆ ದೇವಕ್ಕ ಗುಡಿಮನಿ, ಹುಮಾಯೂನ್ ಮಾಗಡಿ, ಪಿಎಸ್‌ಐ ಚನ್ನಯ್ಯ ದೇವೂರ, ಹೊನ್ನಪ್ಪ ಶಿರಹಟ್ಟಿ, ಗೂಳಪ್ಪ ಕರಿಗಾರ, ದೇವಪ್ಪ ಬಟ್ಟೂರ, ಸೋಮಗೌಡ ಮರಿಗೌಡ, ಮಹೇಶ್ ಹಾರೋಗೇರಿ, ನಿಂಗಪ್ಪ ಗುಡ್ಡದ, ರಮೇಶ್ ಲಮಾಣಿ, ನಾರಾಯಣ ಪವಾರ, ತಿಪ್ಪಣ್ಣ ಸಂಶಿ, ವೀರಯ್ಯ ಮಠಪತಿ, ಶಿವಣ್ಣ ಕರಿಗಾರ, ಮಂಜುನಾಥ ಕಟ್ಟಿಕಾರ, ಕಾಶಪ್ಪ ಗೂಳಪ್ಪನವರ, ಕರಿಯಪ್ಪ ಕುಳಗೇರಿ, ಆನಂದ ಮಾಳೆಕೊಪ್ಪ ಇತರರಿದ್ದರು.