ಕುಮಟಾ: ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜೀವನ ಮೌಲ್ಯ, ಸಂಸ್ಕೃತಿ ಹಾಗೂ ಸಂಸ್ಕಾರ ನೀಡಿದಾಗಲೇ ಭವಿಷ್ಯದಲ್ಲಿ ಕಲಿಕೆ ಸಾರ್ಥಕತೆಯ ದರ್ಶನವಾಗುತ್ತದೆ ಎಂದು ಚಿತ್ರಾಪುರ ಮಠದ ಶ್ರೀಮದ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶನಿವಾರ ತಾಲೂಕಿನ ಮಲ್ಲಾಪುರದ ಪ್ರೌಢಶಾಲೆಯ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.
ಶಿಕ್ಷಣ ಕೇಂದ್ರಗಳು ಯಾವುದೇ ಮಠ, ಮಂದಿರಗಳಿಗೆ ಕಡಿಮೆಯಿಲ್ಲದಷ್ಟು ಪೂಜ್ಯ ಸ್ಥಾನ ಹೊಂದಿದೆ. ಸಾಧಕರಿಗೆ ನೆಲೆಯಾದ ಮಲ್ಲಾಪುರ ಪ್ರೌಢಶಾಲೆಯು ಗುರುಪರಂಪರೆಯ ಪ್ರಭಾವದಲ್ಲಿ ವಿಶೇಷ ಮೆರುಗು ಪಡೆದಿದೆ. ಸುವರ್ಣ ಸಂಭ್ರಮ ಆಚರಿಸಿಕೊಳ್ಳುತ್ತಿರುವ ಈ ಶಾಲೆ ಜ್ವಾಜಲ್ಯಮಾನವಾಗಿ ಬೆಳಗಲಿ ಎಂದು ಆಶೀರ್ವದಿಸಿದರು.
ಶಿವಮೊಗ್ಗ ಕೃಷಿ ವಿವಿ ಉಪಕುಲಪತಿ ಡಾ.ಎಂ.ಕೆ. ನಾಯ್ಕ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಖಾಸಗಿ ಶಾಲೆಗಳ ಪ್ರಭಾವದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುವ ಹಂತ ತಲುಪಿವೆ. ಅದರ ನಡುವೆಯೂ ಗುರುಪ್ರಸಾದ ಪ್ರೌಢಶಾಲೆ ಬೆಳೆದಿದೆ. ವಿದ್ಯಾರ್ಥಿಗಳು ಮಾನವೀಯ ಮೌಲ್ಯ ಬೆಳೆಸಿಕೊಳ್ಳಬೇಕು. ವೈಜ್ಞಾನಿಕ ಕ್ರಾಂತಿಯಲ್ಲಿ ಹಳ್ಳಿಗಳು ವೃದ್ಧಾಶ್ರಮಗಳಾಗುತ್ತಿರುವುದು ಬೇಸರದ ಸಂಗತಿ ಎಂದರು.
ಶಾಸಕ ದಿನಕರ ಶೆಟ್ಟಿ ಮಾತನಾಡಿ, ಪರಿಜ್ಞಾನ ಪೂರ್ವ ವಿದ್ಯಾರ್ಥಿಗಳ ಸಂಘವು ಸುವರ್ಣ ಮಹೋತ್ಸವ ಸುಂದರ ಕಾರ್ಯಕ್ರಮ ಹಮ್ಮಿಕೊಂಡು, ಇತರ ಪ್ರೌಢಶಾಲೆಗಳಿಗೆ ಮಾದರಿಯಾಗಿದೆ ಎಂದರು.
ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎ. ನಾಯ್ಕ ಮಾತನಾಡಿದರು. ಗುರುಪ್ರಸಾದ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ನಾರಾಯಣ ಮಲ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಕೋಶಾಧ್ಯಕ್ಷ ಜಿ.ಎಸ್. ಹೆಗಡೆ, ಸುವರ್ಣ ಮಹೋತ್ಸವ ಸಮಿತಿ ಉಪಾಧ್ಯಕ್ಷ ಎಚ್.ಆರ್. ನಾಯ್ಕ, ಉದ್ಯಮಿ ಜಿತೇಂದ್ರ ದೀವಗಿ ವೇದಿಕೆಯಲ್ಲಿದ್ದರು.
ಪ್ರೊ. ಪ್ರಕಾಶ ಪಂಡಿತ ಸಂಪಾದಕತ್ವದಲ್ಲಿ ರಚಿಸಿದ ಸುವರ್ಣ ಸೌರಭ ಹಸ್ತ ಪತ್ರಿಕೆಯನ್ನು ಶ್ರೀಗಳು ಲೋಕಾರ್ಪಣೆಗೊಳಿಸಿದರು. ಚಿತ್ರಾಪುರ ಮಠದ ಶಿಷ್ಯರು ವೇದಘೊಷ ಮಾಡಿದರು. ಪೂರ್ವ ವಿದ್ಯಾರ್ಥಿಗಳ ಸಂಘದಿಂದ ಶ್ರೀಗಳ ಪಾದಪೂಜೆ ನೆರವೇರಿಸಲಾಯಿತು. ವಿದ್ಯಾರ್ಥಿನಿ ನಾಗಶ್ರೀ ನಾಯ್ಕ ಸಂಗಡಿಗರು ಪ್ರಾರ್ಥಿಸಿ, ಸ್ವಾಗತಿಸಿದರು. ಪರಿಜ್ಞಾನ ಪೂರ್ವ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಎಂ.ಕೆ. ಹೆಗಡೆ ಮಾತನಾಡಿದರು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಅರುಣ ಉಭಯಕರ ಸ್ವಾಗತಿಸಿದರು. ಮುಖ್ಯಾಧ್ಯಾಪಕ ಎಂ.ಟಿ. ಗೌಡ ವರದಿ ವಾಚಿಸಿದರು. ಶಿಕ್ಷಕರಾದ ಮಹಾಲಕ್ಷ್ತ್ರಿ್ಮ ಭಟ್ಟ ಹಾಗೂ ರಾಜು ಲಮಾಣಿ ನಿರೂಪಿಸಿದರು. ಉಪನ್ಯಾಸಕ ಆನಂದ ನಾಯಕ ವಂದಿಸಿದರು.