ಜಿಲ್ಲೆ

ಸಂಸ್ಕೃತಿ ರಕ್ಷಿಸುತ್ತಿರುವ ಹಳ್ಳಿಗಳು

ಹುಲಸೂರ: ಗ್ರಾಮೀಣ ಭಾಗವೂ ನಮ್ಮ ಸಂಸ್ಕೃತಿಯ ರಾಯಭಾರಿಗಳಾಗಿದ್ದು, ಹಳ್ಳಿಗಳಲ್ಲಿ ಸಂಸ್ಕೃತಿ ರಕ್ಷಿಸುವ ಕೆಲಸವಾಗುತ್ತಿದೆ. ವಿಶ್ವದಲ್ಲಿ ಭಾರತೀಯ ಸಂಸ್ಕೃತಿಯೂ ಶ್ರೇಷ್ಠವಾಗಿದ್ದು, ಅದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಮಲ್ಲಮ್ಮ ನಾಗನಕೆರೆ ಹೇಳಿದರು.

ಮೋರಂಬಿ ಗ್ರಾಮದ ಶ್ರೀ ಶರಬಸವೇಶ್ವರ ದೇವಸ್ಥಾನದಲ್ಲಿ ಶ್ರೀ ಮಹಾದೇವಪ್ಪ ಶರಣರ ಸಂಕಲ್ಪದಂತೆ ಶನಿವಾರ ಏರ್ಪಡಿಸಿದ್ದ ಮುತ್ತೈದೆಯರಿಗೆ ಉಡಿತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿ, ಮಹಾದೇವಪ್ಪ ಶರಣರು ಕಲಬುರಗಿಯ ಶ್ರೀ ಶರನಬಸವೇಶ್ವರರ ಹಾಗೆ ದಾಸೋಹ ಮಾಡುತ್ತಿದ್ದರು. ಸಹಸ್ರಾರು ಭಕ್ತರಿಗೆ ಪ್ರಸಾದ ನೀಡುತ್ತಿದ್ದರು. ಅವರ ಸ್ಮರಣೆಗಾಗಿ ಮುತ್ತೆÊದೆಯರಿಗೆ ಉಡಿ ತುಂಬುವ ಭವ್ಯ ಕಾರ್ಯಕ್ರಮ ಆಯೋಜಿಸಿದ್ದಾರೆ. ಹೀಗೆ ಮುಂದುವರಿಯಲಿ ಎಂದರು.

ಕಪಲಾಪುರದ ನೀಲಮ್ಮ ತಾಯಿ ಸಾನ್ನಿಧ್ಯ ವಹಿಸಿದರು. ಗ್ರಾಪಂ ಅಧ್ಯಕ್ಷೆ ಶಿವನಂದಾ ಬಿರಾದಾರ ಅಧ್ಯಕ್ಷತೆ ವಹಿಸಿದ್ದರು. ಶಿಲ್ಪಾ ಪವಾಡಶೆಟ್ಟಿ, ಜಯಶ್ರೀ ಜಾಧವ್, ಜ್ಯೋತಿ ಪಾಟೀಲ್, ವಿದ್ಯಾವತಿ ಅಷ್ಟೂರೆ, ರೇಖಾ ಜ್ಯೋತೆಪ್ಪ, ಸಕುಬಾಯಿ ಜಾಧವ್, ರುದ್ರಾಣಿ ಬಕ್ಕಾ, ಸುವರ್ಣ ಬಲ್ಲೂರೆ, ಶೃತಿ ಪಾಟೀಲ್ ಇತರರಿದ್ದರು. ತ್ರಿಶೀಲಾ ಜಾಧವ್ ಸ್ವಾಗತಿಸಿದರು. ಪಾರ್ವತಿ ಧುಮ್ಮನಸೂರೆ ನಿರೂಪಣೆ ಮಾಡಿದರು. ಜ್ಯೋತಿ ಗುಂದಗೆ ವಂದಿಸಿದರು.

ಸಕುಬಾಯಿ ಜಾಧವ್ ಅವರಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ನಿರ್ಮಲಾ ಪಾಟೀಲ್, ರುದ್ರಾಣಿ ಬಕ್ಕಾ, ವಿಮಲಾ ಚಾಕೊತೆ, ಲಕ್ಷ್ಮೀ ಗುಂದಗೆ ಅವರಿಂದ ಕೋಲಾಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಮೋರಂಬಿ ಸೇರಿ ಸುತ್ತಲಿನ ಗ್ರಾಮಗಳ ಸಹಸ್ರಾರು ಭಕ್ತರು ಭಾಗವಹಿಸಿ, ಶರಣರ ದರ್ಶನ ಪಡೆದರು.