ಮೈಸೂರು: ಸಂಸ್ಕೃತಿ, ಸಂಸ್ಕಾರ ಮರೆತರೆ ನಾಗರಿಕತೆ ಬದುಕುವುದಿಲ್ಲ ಎಂದು ವಾಗ್ಮಿ ಹಿರೇಮಗಳೂರು ಕಣ್ಣನ್ ಹೇಳಿದರು.
ಶ್ರೀ ಜಯಚಾಮರಾಜೇಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಭಾನುವಾರ ಸಂಜೆ ಆಯೋಜಿಸಿದ್ದ ‘ಶಬ್ದ-2023’ ರಾಜ್ಯ ಮಟ್ಟದ ಕಲಾ ಸಾಹಿತ್ಯಿಕ ಪರ್ವ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಆಧುನಿಕ ಸಮಾಜ ಸಂಸ್ಕೃತಿ ಮರೆತು ಅಭಿವೃದ್ಧಿ ನಾಗಾಲೋಟದ ಕಡೆ ಮುಖ ಮಾಡಿದೆ. ಇದು ಸರಿಯಲ್ಲ. ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು. ಇದರೊಂದಿಗೆ ಕನ್ನಡ ಭಾಷಾಭಿಮಾನವನ್ನೂ ಮೈಗೂಡಿಸಿಕೊಳ್ಳಬೇಕು ಎಂದರು.
ಪ್ರತಿಯೊಬ್ಬರಿಗೂ ವಿಜ್ಞಾನ ಬುದ್ಧಿ, ತತ್ವಜ್ಞಾನದ ಮನಸ್ಸು ಮತ್ತು ಕವಿ ಹೃದಯ ಇರಬೇಕು. ಇದರಿಂದ ಸದಾ ಲವಲವಿಕೆ, ಸಂತೋಷ ಇರಲು ಸಾಧ್ಯವಾಗುತ್ತದೆ ಎಂದರು.
ಎಲ್ಲರೂ ನಗಬೇಕು. ಮಗುವಿನಂತೆ ನಗಬೇಕು. ಮನಸ್ಸು ಕೂಡ ಹಾಗೇ ಇಟ್ಟುಕೊಟ್ಟಬೇಕು. ಆದರೆ, ಗುಣ ಬಿಟ್ಟು ಹಣವನ್ನು ಸಂಪಾದಿಸಿದರೆ ಹೆಣ ಆಗಬೇಕಾಗುತ್ತದೆ. ಆದ್ದರಿಂದ ಹಣ ಬಿಟ್ಟು ಗುಣವನ್ನು ಗಳಿಸಬೇಕು ಎಂದರು.
ಅಹಂ ಬಿಟ್ಟು ಬದುಕಬೇಕು. ‘ನನಗೆ ಎಲ್ಲ ಗೊತ್ತು, ನಾನೇ ಬುದ್ಧಿವಂತ’ ಎಂಬ ದುರಹಂಕಾರ ಇರಬಾರದು. ಪ್ರತಿಭೆ ಎದೆಗೂಡಿನಲ್ಲಿರಬೇಕು. ಸಮಯ, ಪರಿಸ್ಥಿತಿಗೆ ತಕ್ಕಂತೆ ವ್ಯಕ್ತಪಡಿಸಬೇಕೇ ಹೊರತು, ಪ್ರದರ್ಶನ ಮಾಡಬಾರದು ಎಂದರು.
ಸಾಹಿತಿ ನಾಗಶ್ರೀ ತ್ಯಾಗರಾಜ್ ಇದ್ದರು.