ಬೀದರ್: ಉತ್ತಮ ಸಮಾಜ ನಿರ್ಮಾಣ, ದೇಶ ಪ್ರೇಮ, ಭಾರತೀಯ ಸಂಸ್ಕೃತಿ ಪ್ರತಿಬಿಂಬಿಸುವ ಸಾಹಿತ್ಯ ರಚನೆ ಇಂದಿನ ಅಗತ್ಯವಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಕಲಬುರಗಿ ವಿಭಾಗ ಪ್ರಮುಖ ಡಾ.ಶಿವಶರಣಪ್ಪ ಗೋಡ್ರಾಳ ಹೇಳಿದರು.
ನಗರದ ಸರಸ್ವತಿ ಶಾಲೆ ಗಿರಿಜಾ ಸಭಾಮಂಟಪದಲ್ಲಿ ಅಯೋಧ್ಯೆ ಶ್ರೀ ರಾಮಮಂದಿರ ನಿರ್ಮಾಣಕ್ಕೆ ಪೂರಕವಾಗಿ `ಅಯೋಧ್ಯೆಯಲ್ಲಿ ರಾಮಮಂದಿರ-ಹೃದಯದಲ್ಲಿ ರಾಮಚಂದಿರ' ಶೀರ್ಷಿಕೆ ಮೇಲೆ ಭಾನುವಾರ ಆಯೋಜಿಸಿದ ಕವಿಗೋಷ್ಠಿಯಲ್ಲಿ ಮಾತನಾಡಿ, ಕವಿ ಮತ್ತು ಕಾವ್ಯ ರಚನೆಯಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ನಾಂದಿಯಾಗುತ್ತದೆ. ದೇಶಾಭಿಮಾನ ಹುಟ್ಟಿಸುವ ಸಾಹಿತ್ಯ ರಚನೆಗೆ ಆದ್ಯತೆ ಕೊಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಡಾ. ಶಿವಕುಮಾರ ಉಪ್ಪೆ ಮಾತನಾಡಿ, ಎಲ್ಲ ಪ್ರಕಾರಗಳ ಸಾಹಿತ್ಯವನ್ನು ಒಳಗೊಂಡ ಪರಿಷತ್ ಇದಾಗಿದೆ. ದೇಶಾದ್ಯಂತ ಪರಿಷತ್ ಸಂಘಟನೆಯಿದೆ. ರಾಷ್ಟ್ರೀಯ ವಿಚಾರಧಾರೆಗಳ ಜತೆಗೆ ವಿಶಾಲ ಭಾರತದ ಪರಿಕಲ್ಪನೆ ಒಳಗೊಂಡು ಯಾವುದೇ ಜಾತಿ, ಗಡಿ, ಸೀಮೆಗಳಿಗೆ ಸೀಮಿತವಲ್ಲದ ವಿಶಾಲ ಮನೋಭಾವ ಒಳಗೊಂಡು ರಾಷ್ಟ್ರ ಪ್ರೇಮ ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದರು.
ಆರೆಸ್ಸೆಸ್ ಉತ್ತರ ಕರ್ನಾಟಕ ಶಾರೀರಿಕ ಪ್ರಮುಖ ನಾಗೇಶ ರೆಡ್ಡಿ, ಹಿರಿಯ ಸಾಹಿತಿ ಡಾ. ಎಂ.ಜಿ. ದೇಶಪಾಂಡೆ ಮಾತನಾಡಿದರು. ಪ್ರೊ.ಸಿದ್ರಾಮಪ್ಪ ಮಾಸಿಮಾಡೆ, ರಾಮಕೃಷ್ಣನ್ ಸಾಳೆ, ಡಾ.ಸಂಜೀವಕುಮಾರ ಅತಿವಾಳೆ, ಡಾ.ಬಂಡಯ್ಯ ಸ್ವಾಮಿ, ಸಂತೋಷಕುಮಾರ, ಸಂಜಯ ಮಾನೂರೆ, ಹನುಮಂತರಾವ ಪಾಟೀಲ್, ಮನೋಜಕುಮಾರ, ಉಮಾಕಾಂತ ಅಲ್ಮಾಜೆ, ಶಿವರಾಜ ಬಿರಾದಾರ, ಡಾ.ಅಲ್ಲೂರೆ ಇತರರಿದ್ದರು. ಡಾ.ಜಗದೇವಿ ತಿಬಶೆಟ್ಟಿ ಸ್ವಾಗತಿಸಿದರು. ಡಾ.ಶ್ರೇಯಾ ಮಹಿಂದ್ರಕರ್ ನಿರೂಪಣೆ ಮಾಡಿದರು. ನಾಗೇಶ ಸ್ವಾಮಿ ಮಸ್ಕಲ್ ವಂದಿಸಿದರು.
ಪ್ರಸ್ತುತ ರಾಷ್ಟ್ರ ನಿರ್ಮಾಣ ಮಾಡುವ ಸಾಹಿತ್ಯ ರಚನೆಯ ಅಗತ್ಯವಿದೆ. ಪೂರ್ವ, ಪಶ್ಚಿಮ ರಾಷ್ಟ್ರಗಳ ಮಧ್ಯೆ ಇರುವ ಸಂಘರ್ಷವನ್ನು ಹೋಗಲಾಡಿಸುವ ಸಾಹಿತ್ಯ ಉದಯವಾಗಬೇಕು. ಈ ನಿಟ್ಟಿನಲ್ಲಿ ಕವಿ-ಕಾವ್ಯ ಸಮಾಜಕ್ಕೆ ಸಂದೇಶ ನೀಡಬೇಕು. ಜೀವನ ಮೌಲ್ಯಗಳ ಪ್ರತಿಷ್ಠಾಪನೆಗೆ ಪರಿಷತ್ ಉತ್ತಮ ಕೆಲಸ ಮಾಡುತ್ತಿದೆ.| ನಾಗೇಶರೆಡ್ಡಿಆರೆಸ್ಸೆಸ್ ಉತ್ತರ ಕರ್ನಾಟಕ ಶಾರೀರಿಕ ಪ್ರಮುಖ