ಚಿತ್ರದುರ್ಗ: ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ವೈಜ್ಞಾನಿಕ ಆವಿಷ್ಕಾರ ಬೆನ್ನತ್ತಿ ಹೊರಟಿರುವ ಕಾರಣ ಸಂತಸ ಇಲ್ಲದಂತಾಗಿದೆ ಎಂದು ಗಂಗಾವತಿ ಕಲ್ಮಠ ಚನ್ನಬಸವಸ್ವಾಮಿ ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ ವಿಷಾದಿಸಿದರು.
ಐಎಂಎ ಸಭಾಂಗಣದಲ್ಲಿ ಚಿತ್ರದುರ್ಗ ಇತಿಹಾಸ ಕೂಟ, ಇತಿಹಾಸ-ಸಂಸ್ಕೃತಿ-ಸಂಶೋಧನೆಗಳ ವಿಚಾರ ವೇದಿಕೆ, ರೇಣುಕಾ ಪ್ರಕಾಶನದಿಂದ ಭಾನುವಾರ ನಡೆದ 49ನೇ ಉಪನ್ಯಾಸ ಕಾರ್ಯಕ್ರಮದಲ್ಲಿ ಕಿಷ್ಕಿಂಧೆ ಅಸ್ಮಿತೆಯ ಸವಾಲುಗಳು ಎಂಬ ವಿಷಯದ ಕುರಿತು ಮಾತನಾಡಿದರು.
ಪರಸ್ಪರ ಸಂಬಂಧ, ಕೌಟುಂಬಿಕ ಮೌಲ್ಯ ನಶಿಸುತ್ತಿವೆ. ಹೀಗಾಗಿ ಆತಂಕದ ದಿನಗಳನ್ನು ಎದುರು ನೋಡುವಂತಾಗಿದೆ. ಆದ್ದರಿಂದ ಸಂಸ್ಕೃತಿ, ಪರಂಪರೆ ಕಡೆ ಮುಖ ಮಾಡುವುದೇ ಉತ್ತಮ ಎಂದು ತಿಳಿಸಿದರು. ಕಿಷ್ಕಿಂಧೆ ಒಂದು ಪೌರಾಣಿಕ ಸ್ಥಳ ಎನ್ನುವುದು ರಾಮಾಯಣ, ಮಹಾಭಾರತದಲ್ಲಿ ಉಲ್ಲೇಖವಾಗಿದೆ. ಆದರೆ, ಉತ್ತರ ಭಾರತದಲ್ಲಿದೆ ಎಂದೇಳಲು ಅನೇಕ ಸವಾಲುಗಳನ್ನು ಎದುರಿಸಬೇಕಿದೆ ಎಂದರು.
ವಾನರ ಸಮುದಾಯ ಕಿಷ್ಕಿಂಧೆಯಲ್ಲಿತ್ತು. ಹನುಮಂತ, ಸುಗ್ರೀವ, ವಾಲಿ ಇದ್ದ ಸ್ಥಳ ಎಂದು ಹೇಳಲಾಗುತ್ತಿದೆ. ರಾಮಾಯಣ, ಮಹಾಭಾರತ ಸತ್ಯವೋ ಕಾಲ್ಪನಿಕವೋ ಎನ್ನುವ ಚರ್ಚೆಗಳೂ ನಡೆಯುತ್ತಿದೆ. ಕರ್ನಾಟಕದ ಹಂಪಿಯ ಆನೆಗುಂದಿ ಪ್ರದೇಶವೇ ಕಿಷ್ಕಿಂಧೆ ಎಂಬ ನಂಬಿಕೆ ಇದ್ದು, ಪ್ರಾಚೀನ ಸಾಹಿತ್ಯಗಳಲ್ಲೂ ಉಲ್ಲೇಖವಾಗಿದೆ ಎಂದು ಹೇಳಿದರು.
ಇತಿಹಾಸ ಕೂಟದ ನಿರ್ದೇಶಕ ಲಕ್ಷ್ಮಣ್ ತೆಲಗಾವಿ, ಸಂಚಾಲಕ ಡಾ.ಎನ್.ಎಸ್.ಮಹಂತೇಶ್, ಸಹಾಯಕ ಪ್ರಾಧ್ಯಾಪಕ ವೈ.ಬಿ.ನಟರಾಜ್, ಉಪನ್ಯಾಸಕ ಡಾ.ಓ.ದೇವರಾಜ್, ಸಾಹಿತಿ ಬಿ.ಎಲ್.ವೇಣು, ಮದಕರಿನಾಯಕ ಸಾಂಸ್ಕೃತಿಕ ಕೇಂದ್ರದ ಅಧ್ಯಕ್ಷ ಡಿ.ಗೋಪಾಲಸ್ವಾಮಿ ನಾಯಕ, ಮೃತ್ಯುಂಜಯಪ್ಪ, ಪ್ರೊ.ಎಚ್.ಲಿಂಗಪ್ಪ, ಜಿ.ಎಸ್.ಉಜ್ಜಿನಪ್ಪ ಇತರರಿದ್ದರು.