ಬಾಗಲಕೋಟೆ: ಸಂಸ್ಕೃತಿಯು ನಮ್ಮ ದೇಶದ ದೊಡ್ಡ ಸಂಪತ್ತು. ಯುವಕರು ಅದನ್ನು ಉಳಿಸಿ-ಬೆಳೆಸಬೇಕು. ಪಠ್ಯಪೂರಕ ಕಾರ್ಯಕ್ರಮಗಳು ಈ ದಿಶೆಯಲ್ಲಿ ಸಹಕಾರಿಯಾಗಿವೆ ಎಂದು ವಿಜಯಪುರದ ಮಹಿಳಾ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಮೀನಾ ಚಂದಾವರಕರ ಅಭಿಪ್ರಾಯಪಟ್ಟರು.
ಇಲ್ಲಿನ ವಿದ್ಯಾ ಪ್ರಸಾರಕ ಮಂಡಳದ ಎಸ್.ಆರ್. ನರಸಾಪುರ ಕಲಾ ಹಾಗೂ ಎಂ.ಬಿ. ಶಿರೂರ ವಾಣಿಜ್ಯ ಮಹಾವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗ ಮತ್ತು ಆಯ್‌ಕ್ಯೂಎಸಿ ಸಹಯೋಗದಲ್ಲಿ ಬುಧವಾರ ನಡೆದ ಐದು ದಿವಸಗಳ ವಾಣಿಜ್ಯೋತ್ಸವ-೨ಕೆ೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ೧೫ ರಿಂದ ೩೫ ವಯಸ್ಸಿನ ಯುವಕರ ಸಂಖ್ಯೆಯೇ ಹೆಚ್ಚು. ಅವರು ರಚನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಯುವಶಕ್ತಿಯ ಸದ್ಬಳಕೆ ಮಾಡಿಕೊಳ್ಳುವದರ ಮೂಲಕ ಪ್ರಗತಿಯನ್ನು ಸಾಽಸಬಹುದು. ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವದರಿಂದ ವಿದ್ಯಾರ್ಥಿಗಳು ಸೃಜನಶೀಲ ಗುಣಗಳನ್ನು ಬೆಳೆಸಿಕೊಳ್ಳಬಹುದು. ನಾವಿನ್ಯತೆಯನ್ನು ಮೈಗೂಡಿಸಿಕೊಳ್ಳಬಹುದು. ಹೊಸ ವಿಚಾರಧಾರೆಗಳ ಮೂಲಕ ಹೊಸ ದಿಕ್ಕು ಕಾಣಬಹುದು ಎಂದರು.
ಪ್ರಾಚಾರ್ಯೆ ಡಾ.ವಿ.ಎಸ್.ಮಠ ಅಧ್ಯಕ್ಷತೆ ಮಾತನಾಡಿ, ಪಠ್ಯಪೂರಕ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಯಶಸ್ವೀ ಜೀವನಕ್ಕೆ ಸಹಕಾರಿಯಾಗಿವೆ. ಇವುಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿಯಿಂದ ಭಾಗವಹಿಸಬೇಕು ಎಂದರು.
ಪ್ರಧಾನ ಕಾರ್ಯದರ್ಶಿ ಅಶ್ವಿನಿ ಬಿಲ್ಲಾರ ಪ್ರಾರ್ಥಿಸಿದರು. ವಿದ್ಯಾರ್ಥಿನಿ ಗೌರಿ ಚವ್ಹಾಣ ನಿರೂಪಿಸಿದರು. ಉಪನ್ಯಾಸಕ ಎನ್.ಬಿ.ಹಸಬಿ ವಂದಿಸಿದರು. ಐಕ್ಯೂಎಸಿ ಸಂಯೋಜಕ ಡಾ.ಎಸ್.ಎಸ್.ಹಂಗರಗಿ, ಶಿಕ್ಷಣ ಸಂಯೋಜಕ ಜಿ.ಎನ್.ಕುಲಕರ್ಣಿ, ನಿವೃತ್ತ ಪ್ರಾಧ್ಯಾಪಕರಾದ ಡಾ.ಪಿ.ಎಸ್.ಹುಯಿಲಗೋಳ.ಡಾ.ಪಿ.ಆರ್.ಜೋಶಿ,ಜಿ.ಜೆ.ಮೊರಬ ಮತ್ತಿತರರು ಉಪಸ್ಥಿತರಿದ್ದರು.