ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಹಿಂದು ಕಾರ್ಯಕರ್ತರು ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದರು. 
ಜಿಲ್ಲೆ

ಸಂಸ್ಕೃತಿ ಜೋಡಿಸುವ ಕಾರ್ಯಕ್ಕೆ ಹಿಂದುಗಳು ಕೈಜೋಡಿಸಲಿ

ವಿರಾಜಪೇಟೆ: ಪರಕೀಯರ ದಾಳಿಯಿಂದಾಗಿ ನುಚ್ಚುನೂರಾದ ದೇಶದ ಸಂಸ್ಕೃತಿಯನ್ನು ಮತ್ತೊಮ್ಮೆ ಜೋಡಿಸುವ ಕಾರ್ಯಕ್ಕೆ ಹಿಂದುಗಳು ಕೈಜೋಡಿಸುವ ಮೂಲಕ ಒಗ್ಗಟ್ಟಿನ ಮಂತ್ರ ಪಠಿಸಬೇಕು ಎಂದು ನಿವೃತ್ತ ಸೈನ್ಯಾಧಿಕಾರಿ ಮೇಜರ್ ಬಿದ್ದಂಡ ನಂಜಪ್ಪ ಸಲಹೆ ನೀಡಿದರು.

ಅಖಂಡ ಭಾರತ ಸಂಕಲ್ಪ ದಿನ ಅಂಗವಾಗಿ ಹಿಂದು ಜಾಗರಣಾ ವೇದಿಕೆಯ ತಾಲೂಕು ಘಟಕ ವತಿಯಿಂದ ನಗರದ ಮಹಿಳಾ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾವಿರಾರು ವರ್ಷಗಳ ಇತಿಹಾಸವಿರುವ ಭರತ ಖಂಡ ವಿವಿಧ ಸಂಸ್ಕೃತಿಗಳ ನೆಲೆವೀಡಾಗಿತ್ತು. ಡಚ್ಚರು, ಆಂಗ್ಲರು, ಮೊಗಲರು..ಹೀಗೆ ಪರಕೀಯರ ದಾಳಿಗೆ ಒಳಪಟ್ಟು ಭಾರತ ಹಲವು ತುಂಡು-ತುಂಡುಗಳಾಗಿ ಕತ್ತರಿಸಿ ಹೋಯಿತು. ಛಿದ್ರಗೊಂಡಿರುವ ಭಾರತದ ಮರುಜೋಡಣೆಗೆ ಜಾತೀಯತೆಯನ್ನು ತ್ಯಜಿಸಿ ಧರ್ಮ ಒಂದೇ ಎಂದು ಚಿಂತಿಸಿ ಅಖಂಡ ಭಾರತದ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ವಿದ್ಯಾ ಭಾರತೀಯ ಸಂಸ್ಥೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಉಮೇಶ್ ಮಾತನಾಡಿ, ಧೀಮಂತ ಸಂಸ್ಕೃತಿ ನಮ್ಮದಾಗಿತ್ತು. ಆಕ್ರಮಣಕಾರರು, ಪ್ರಬಲಮತೀಯ ಪರಕೀಯರ ದಾಳಿಯಿಂದಾಗಿ ಅಖಂಡ ಭಾರತ ವಿಭಜನೆಗೊಂಡಿತು. ಧರ್ಮ ಮತ್ತು ಸಂಸ್ಕೃತಿಗಳ ಸಮಾನತೆಯಿಂದ ಮಾತ್ರ ರಾಷ್ಟ್ರ ನಿರ್ಮಾಣ ಸಾದ್ಯ. ವಿಭಜಿತವಾಗಿರುವ ಭಾರತವನ್ನು ಒಂದು ಮಾಡಲು ಹಿಂದುಗಳು ಕೈಜೋಡಿಸಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ಹಿಂದು ಜಾಗರಣಾ ವೇದಿಕೆಯ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅಲೆಮಾಡ ತಿಮ್ಮಯ್ಯ, ಜಿಲ್ಲಾ ಸಂಚಾಲಕ ಚಕ್ಕೇರ ಮನು, ತಾಲೂಕು ಸಂಚಾಲಕ ಗಣೇಶ್, ಜಿಲ್ಲಾ ಸಹ ಸಂಯೋಜಕ ಯೋಗೇಶ್, ಜಿಲ್ಲಾ ಘಟಕದ ಅನಿಲ್ ಸಿದ್ದಾಪುರ ಇತರರಿದ್ದರು.

ಬೃಹತ್ ಪಂಜಿನ ಮೆರವಣಿಗೆ: ನಗರದ ತೆಲುಗರ ಬೀದಿಯ ಮಾರಿಯಮ್ಮ ದೇವಾಲಯ ಮುಂಭಾಗ ಭಾರತಾಂಬೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು. ಬಳಿಕ ಕಾರ್ಯಕರ್ತರು ಬೃಹತ್ ಪಂಜಿನ ಮೆರವಣಿಗೆ ಆರಂಭವಾಯಿತು. ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆ, ಮಹಿಳಾ ಸಮಾಜ ಸಭಾಂಗಣದಲ್ಲಿ ಅಂತ್ಯಗೊಂಡಿತು. ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದು ಕಾರ್ಯಕರ್ತರು ಪಾಲ್ಗೊಂಡಿದ್ದರು.