ಕೊಳ್ಳೇಗಾಲ: ರಂಗದೇಗುಲ ಕಲಾವೇದಿಕೆಯು ನಾಡಿನ ಸಂಸ್ಕೃತಿ, ಜನಪದ ಕಲೆಯನ್ನು ಜನಸಮುದಾಯದ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದೆ ಎಂದು ಮಾಜಿ ಶಾಸಕ ಎಸ್.ಬಾಲರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ತಾಲೂಕಿನ ಪಾಳ್ಯ ಗ್ರಾಮದ ಬಸ್ ನಿಲ್ದಾಣದಲ್ಲಿ ಶುಕ್ರವಾರ ಯಳಂದೂರಿನ ರಂಗದೇಗುಲ ಕಲಾ ವೇದಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜನಪದ ಸೌರಭ ಸಾಂಸ್ಕೃತಿಕ ಕಾರ್ಯ ಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಸ್ತುತ ಸಿನಿಮಾ ಚಿತ್ರಗೀತೆಗಳು ಎಲ್ಲರನ್ನೂ ಸೆಳೆಯುತ್ತಿವೆ. ಸೀರಿಯಲ್‌ಗಳ ಮೋಹ ಹೆಚ್ಚಾಗಿದೆ. ಎಲ್ಲ ಸೀರಿಯಲ್‌ಗಳಲ್ಲಿ ದ್ವೇಷ, ವಂಚನೆ, ಕುಟುಂಬ ಕಲಹವನ್ನೇ ತೋರಿಸುತ್ತಾರೆ. ಆದರೆ, ಅದನ್ನೇ ಮನಸ್ಸು ಇಷ್ಟ ಪಡುತ್ತದೆ. ಇವೆಲ್ಲದ್ದರಿಂದ ನಮ್ಮ ಸಂಸ್ಕೃತಿ, ಜನಪದ ಉಳಿಯುವುದಿಲ್ಲ ಎಂದರು.
ಜನಪದ ಈ ನಾಡಿನ ಬೇರಾಗಿದೆ, ನಾಡಿನ ಕಲೆ, ಸಂಸ್ಕೃತಿಯನ್ನು ಗಟ್ಟಿಗೊಳಿಸುತ್ತದೆ, ಸನ್ಮಾರ್ಗದಲ್ಲಿ ನಡೆಯುವಂತೆ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಜನಪದ ಉಳಿಯಬೇಕು, ಜನಪದ ಕಲಾವಿದರನ್ನು ಬೆಳೆಸಬೇಕು. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆ ಜನಪದ ಅಗತ್ಯವಿದೆ. ಜನಪದ ಉಳಿವಿಗಾಗಿ ಈ ನಿಟ್ಟಿನಲ್ಲಿ ರಂಗದೇಗುಲ ಕಲಾವೇದಿಕೆ ಅಧ್ಯಕ್ಷ ಶಾಂತರಾಜು ಹಾಗೂ ಪದಾಧಿಕಾರಿಗಳು ಶ್ರಮಿಸುತ್ತಿದ್ದಾರೆ ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗ್ರಾಮದಲ್ಲಿ ನಾದಸ್ವರ, ತಮಟೆ ವಾದನ, ಡೊಳ್ಳುಕುಣಿತ ಕಲಾತಂಡಗಳ ಮೆರವಣಿಗೆ ವಿಜೃಂಭಣೆಯಿಂದ ನಡೆಯಿತು. ಸಿದ್ದಪ್ಪಾಜಿ ಕಾವ್ಯ, ಜನಪದ ಗಾಯನ, ಜಾಗೃತಿ ಗೀತೆಗಳು, ಸೋಬಾನೆ ಪದಗಳನ್ನು ಗಾಯಕರು ಹಾಡಿದರು.
ಸುವರ್ಣ ಕರ್ನಾಟಕ ಪ್ರಶಸ್ತಿ ಪುರಸ್ಕೃತೆ ಪ್ರೇಮಲತಾ ಕೃಷ್ಣಸ್ವಾಮಿ ಹಾಗೂ 2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕಗಳಿಸಿರುವ ಕುಶಾಲ್ ಅವರನ್ನು ಸನ್ಮಾನಿಸಲಾಯಿತು.
ಪಾಳ್ಯ ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಚೈತ್ರಾ, ಸದಸ್ಯ ಎಸ್.ಎಂ ಜಗದೀಶ್ ನಾಯಕ, ರಂಗದೇಗುಲ ವೇದಿಕೆ ಅಧ್ಯಕ್ಷ ಶಾಂತರಾಜು, ಪದಾಧಿಕಾರಿಗಳಾದ ಎಂ.ಮಹದೇವಪ್ರಭು, ಶಿವಣ್ಣ, ಸಿದ್ದರಾಜು, ರವಿ, ಪ್ರಕಾಶ್, ನಾಗರಾಜು, ರೂಪೇಶ, ಸೋಮಶೇಖರ್, ಗೀತಾ, ಶಂಕರ, ರಾಧಾ, ಸುಶೀಲಾ, ಭಾಗ್ಯ, ಶಶಿಕಲಾ, ಜನಪದ ಅಕಾಡೆಮಿ ಸದಸ್ಯ ಉಮೇಶ್, ಹೆಡ್ ಕಾನ್‌ಸ್ಟೆಬಲ್ ರಾಮದಾಸ್, ಉಮತ್ತೂರು ಚಂದ್ರು, ರಾಮೇಗೌಡ, ಸುಗಂಧರಾಜ್ ಮತ್ತಿತರಿದ್ದರು.