ಇಂಡಿ ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕಲಾಮೇಳದಲ್ಲಿ ಡಾ. ಅಮೃತಾನಂದ ಶ್ರೀಗಳು ಮಾತನಾಡಿದರು. ಬಸವಲಿಂಗ ಸ್ವಾಮೀಜಿ, ಸಿದ್ಧರಾಮೇಶ್ವರ ಪಟ್ಟದ ಶ್ರೀಗಳು, ಡಿ.ಆರ್. ಶಹಾ ಇದ್ದರು. 
ಜಿಲ್ಲೆ

ಸಂಸ್ಕೃತಿ ಉಳಿಸಿ ಬೆಳೆಸುವ ಹೊಣೆ ಎಲ್ಲರದು

ಇಂಡಿ: ಭಾರತದ ಕಲೆ ಮತ್ತು ಸಂಸ್ಕೃತಿಯು ಜಗತ್ತಿನಲ್ಲಿಯೇ ಶ್ರೀಮಂತವಾಗಿದ್ದು ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಜವಾಬ್ದಾರಿ ಮಕ್ಕಳ ಮೇಲಿದೆ ಎಂದು ಕಾತ್ರಾಳ, ಬಾಲಗಾಂವದ ಡಾ. ಅಮೃತಾನಂದ ಶ್ರೀಗಳು ಹೇಳಿದರು.

ಪಟ್ಟಣದ ಆರ್.ಎಂ. ಶಹಾ ಪಬ್ಲಿಕ್ ಶಾಲೆಯಲ್ಲಿ ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕಲಾಮೇಳವನ್ನು ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.

ಇಂದಿನ ಮೊಬೈಲ್ ಯುಗದಲ್ಲಿ ಕಲೆ ಮತ್ತು ಸಂಸ್ಕೃತಿ ನಾಶವಾಗುತ್ತಿದ್ದು, ಅದನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ಪೀಳಿಗೆಯ ಮೇಲಿದೆ ಎಂದ ಅವರು ಪಾಲಕರ ಸಹಭಾಗಿತ್ವದಲ್ಲಿ ಮಕ್ಕಳು ಪ್ರದರ್ಶಿಸಿದ ಕಲೆಗೆ ಪ್ರಶಂಸೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ ಜ್ಞಾನಯೋಗಾಶ್ರಮದ ಶ್ರೀಬಸವಲಿಂಗ ಸ್ವಾಮೀಜಿ ಮಾತನಾಡಿ, ಈ ಸಂಸ್ಥೆಗೆ ಸಿದ್ಧೇಶ್ವರ ಸ್ವಾಮೀಜಿಗಳು ಹಲವಾರು ಬಾರಿ ಭೇಟಿ ನೀಡಿದ್ದು, ಈಗಾಗಲೇ ಮಕ್ಕಳಲ್ಲಿ ಸಂಸ್ಕಾರ ಬೆಳೆಸುವ ಕುರಿತು ಬೋಧನೆ ಮಾಡಿದ್ದಾರೆ. ಇಲ್ಲಿನ ಮಕ್ಕಳು ಸಂಸ್ಕಾರಯುತವಾಗಿರುವುದು ಹೆಮ್ಮೆಯ ವಿಷಯ ಎಂದರು.

ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಿ.ಆರ್. ಶಹಾ, ಬಸವಕಲ್ಯಾಣದ ಸಿದ್ಧರಾಮೇಶ್ವರ ಪಟ್ಟದ ಶ್ರೀಗಳು, ಸಂಸ್ಕೃತ ಪಾರಂಗತ ನಿವೃತ್ತ ಪ್ರಾಚಾರ್ಯ ಅಂಬಲಿ ಗುರುಗಳು, ಭಾಗ್ಯಜ್ಯೋತಿ ಕೊಳಾರಿ, ಶಿಕ್ಷಕಿ ಸವಿತಾ ಸಾಲಿ, ಪ್ರಾಚಾರ್ಯ ಪ್ರಕಾಶ ಆರ್., ಮಾತನಾಡಿದರು.

ಸಂಸ್ಥೆಯ ಆಡಳಿತಾಧಿಕಾರಿ ಕಲ್ಪನಾ ಶಹಾ, ಕಾರ್ಯದರ್ಶಿ ಮಹೇಶ ಶಹಾ, ಪ್ರಾಂಶುಪಾಲೆ ಪರವೀನ್ ಜಮಾದಾರ, ಗಣ್ಯರು ಪಾಲಕರು ಹಾಗೂ ಶಾಲಾ ಸಿಬ್ಬಂದಿ ವರ್ಗದವರು, ಮಕ್ಕಳು ಮತ್ತಿತರಿದ್ದರು.

ದಶಮಾನೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಚಿತ್ರಕಲಾ ಸ್ಪರ್ಧೆ, ರಂಗೋಲಿ ಬಿಡಿಸುವ ಸ್ಪರ್ಧೆ, ಮಣ್ಣಿನಿಂದ ಮಾದರಿಗಳ ತಯಾರಿಕೆ, ಮೆಹಂದಿ ಬಿಡಿಸುವುದು, ನಿರುಪಯುಕ್ತ ವಸ್ತುಗಳಿಂದ ಕಲಾತ್ಮಕ ಮಾದರಿಗಳನ್ನು ತಯಾರಿಸುವುದು. ಹಣ್ಣು ಮತ್ತು ತರಕಾರಿಗಳಿಂದ ಕಲಾತ್ಮಕ ರಚನೆ. ಸಂಗೀತ ವಾದ್ಯಗಳನ್ನು ನುಡಿಸುವ ಸ್ಪರ್ಧೆಗಳಲ್ಲಿ ಶಾಲಾ ವಿದ್ಯಾರ್ಥಿಗಳು ಪಾಲಕರ ಜತೆಗೆ ಭಾಗವಹಿಸಿ ಪ್ರಥಮ, ದ್ವಿತೀಯ, ಬಹುಮಾನಗಳನ್ನು ತಮ್ಮದಾಗಿಸಿಕೊಂಡರು.