ಜಿಲ್ಲೆ

ಸಂಸ್ಕೃತಿ ಉಳಿವಿಗೆ ಮಠ, ಮಂದಿರಗಳ ಪಾತ್ರ ಅಪಾರ

ಅವಿನಾಶ್ ಜೈನಹಳ್ಳಿ

ತಿ.ನರಸೀಪುರ ತಾಲೂಕು ತಲಕಾಡಿನ ಹಸ್ತಿಕೇರಿ ಮಠದಲ್ಲಿ ಲಿಂಗೈಕ್ಯ ಶ್ರೀ ಸಿದ್ದಮಲ್ಲಿಕಾರ್ಜುನ ಸ್ವಾಮಿಗಳ 107ನೇ ಗಣಾರಾಧನೆ ಭಾನುವಾರ ನೆರವೇರಿತು.

ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ, ಗ್ರಾಹಕ ಪರಿಷತ್ತಿನ ಅಧ್ಯಕ್ಷ ಟಿ.ಜಿ.ಶಿವಶಂಕರ ಗೌಡ ಧಾರ್ಮಿಕ ಸಭೆ ಉದ್ಘಾಟಿಸಿ ಮಾತನಾಡಿ, ಭಾರತೀಯ ಸಂಸ್ಕೃತಿಯ ಪುನರುತ್ಥಾನಕ್ಕೆ ಮಠ-ಮಂದಿರಗಳ ಪಾತ್ರ ಬಹುದೊಡ್ಡದು. ಎಲ್ಲ ಧರ್ಮಗಳ ಮಠ-ಮಂದಿರಗಳು ಹಿಮಾಲಯತನಕ ತಮ್ಮದೇ ಆದ ಸೇವೆಯನ್ನು ಸಲ್ಲಿಸುತ್ತಾ ಇದೆ. ಅದೇ ರೀತಿ ಉತ್ತರ ಕಾಶಿಗಿಂತಲೂ ದಕ್ಷಿಣ ಕಾಶಿ ತಲಕಾಡು ಮಹಾಮಹಿಮೆಯಿಂದ ಕೂಡಿದೆ ಎಂದು ಸ್ಕಂದ ಪುರಾಣದಲ್ಲಿ ವರ್ಣಿತವಾಗಿದೆ. ಇಲ್ಲಿನ ಹಸ್ತೀಕೆರಿ ಮಠವು ಪುರಾತನವಾಗಿದ್ದು ತನ್ನದೇ ಆದ ಸೇವೆ ಮಾಡುತ್ತಿದೆ ಎಂದರು.

ಕನಕಪುರದ ದೇಗುಲ ಮಠದ ಶ್ರೀ ಚನ್ನಬಸವ ಸ್ವಾಮೀಜಿ, ನೆಲಮಂಗಲ ಮಠದ ಶ್ರೀ ಪವಾಡ ಸಿದ್ದಲಿಂಗ ಸ್ವಾಮೀಜಿ, ದೇವನೂರು ಗುರು ಮಲ್ಲೇಶ್ವರ ಮಠದ ಶ್ರೀ ಮಹಾಂತ ಸ್ವಾಮೀಜಿ, ಶಂಕರ ದೇವರಮಠದ ಶ್ರೀ ಶಂಕರ ಸ್ವಾಮೀಜಿ, ಬೇವೂರು ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಪುರಿಗಾಲಿ ಮಠದ ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕಲ್ಲು ಮಠ ಮುಡುಕುತೊರೆಯ ಶ್ರೀ ನಂದಿಕೇಶ್ವರ ಸ್ವಾಮೀಜಿ ಇತರರಿದ್ದರು.

ಮುಖ್ಯ ಅತಿಥಿಗಳಾಗಿ ಭಾಗಿಯಾಗಿದ್ದ ಪತಂಜಲಿ ಯೋಗಾಶ್ರಮದ ಟ್ರಸ್ಟಿನ ಅಧ್ಯಕ್ಷ ಪ್ರಕಾಶ್ ಯೋಗಿ ಮಾತನಾಡಿದರು. ಲಿಂಗೈಕ್ಯ ಸಿದ್ಧಮಲ್ಲಿಕಾರ್ಜುನ ಸ್ವಾಮೀಜಿಯ ಭಾವಚಿತ್ರವನ್ನು ದೇಗುಲ ಮಠದ ಶ್ರೀಚನ್ನಬಸವ ಸ್ವಾಮೀಜಿ ಲೋಕಾರ್ಪಣೆ ಮಾಡಿದರು. ಶ್ರೀ ರುದ್ರಾಕ್ಷಿ ಪೂಜಾ ಮಂಟಪವನ್ನು ನೆಲಮಂಗಲದ ಶ್ರೀಪವಾಡ ಬಸವಣ್ಣ ದೇವರು ಮಠದ ಸ್ವಾಮೀಜಿ ಹಸ್ತಿಕೇರಿ ಮಠಕ್ಕೆ ಹಸ್ತಾಂತರಿಸಿದರು.