ಜಿಲ್ಲೆ

ಸಂಸ್ಕೃತವು ಎಲ್ಲ ಭಾಷೆಗಳ ಆಧಾರ, ಸಂಸ್ಕೃತ ಸಂಧ್ಯಾ ಸಂವಾದದಲ್ಲಿ ಡಾ. ಜನಾರ್ದನ ಹೆಗಡೆ ಅಭಿಮತ

ಹುಬ್ಬಳ್ಳಿ: ಸಂಸ್ಕೃತವು ಎಲ್ಲ ಭಾಷೆಗಳ ಮೂಲ ಆಧಾರವಾಗಿದೆ. ಅದರ ಬಗ್ಗೆ ಬರೀ ಅಭಿಮಾನ ಇದ್ದರೆ ಸಾಲದು. ಈ ಭಾಷೆಯನ್ನು ಪ್ರೀತಿ, ಆತ್ಮೀಯತೆಯಿಂದ ಅಪ್ಪಿಕೊಂಡು, ಉಳಿಸಿ ಬೆಳೆಸಿಕೊಂಡು ಹೋಗುವ ಬಹು ದೊಡ್ಡ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಸಂಸ್ಕೃತಭಾರತ್ಯಾಃ ಸಂಸ್ಥಾಪಕ ಡಾ. ಜನಾರ್ದನ ಹೆಗಡೆ ಹೇಳಿದರು.

ಇಲ್ಲಿಯ ಜೆ.ಸಿ. ನಗರದ ಮಧುಕುಂಜದಲ್ಲಿ ಶನಿವಾರ ಸಂಸ್ಕೃತಭಾರತಿ ಕರ್ನಾಟಕ ಉತ್ತರ ಭಾಗದ ವತಿಯಿಂದ ಏರ್ಪಡಿಸಿದ್ದ ಸಂಸ್ಕೃತಸಂಧ್ಯಾ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಂಸ್ಕೃತ ಉಳಿದರೆ ಕನ್ನಡವೂ ಸೇರಿದಂತೆ ದೇಶದ ಇತರ ಭಾಷೆಗಳು ಉಳಿಯುತ್ತವೆ. ಹಾಗಾಗಿ ಭಾರತ ದೇಶಕ್ಕೋಸ್ಕರ ಇದನ್ನು ಉಳಿಸಬೇಕಾಗಿದೆ. ಸಂಸ್ಕೃತ ನಿತ್ಯದ ಆಡು ಭಾಷೆಯಾಗಬೇಕು. ಶಿಕ್ಷಣದಲ್ಲಿ ಈ ಭಾಷೆ ಬಳಸಬೇಕು. ತಾಂತ್ರಿಕ, ವೈದ್ಯಕೀಯ ಶಿಕ್ಷಣದಲ್ಲೂ ಇಂಗ್ಲಿಷ್ ಬದಲಾಗಿ ಸಂಸ್ಕೃತ ಪದಗಳನ್ನು ತಯಾರಿ ಮಾಡಬೇಕು. ಇದರ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಇಂಗ್ಲಿಷ್​ನಲ್ಲಿ ಕೇವಲ 20 ಲಕ್ಷ ಶಬ್ದಗಳಿವೆ. ಆದರೆ, ಸಂಸ್ಕೃತದಲ್ಲಿ ಅನಂತಕೋಟಿ ಶಬ್ದ ತಯಾರಿಸುವ ಅವಕಾಶಗಳಿವೆ. ಈ ದಿಸೆಯಲ್ಲಿ ದೇಶಿಯ ಭಾಷೆಗಳನ್ನು ಬೆಳೆಸಲು ಸಂಸ್ಕೃತವು ಒಳ್ಳೆಯ ಸಾಧನವಾಗಿದೆ. ಇದರ ಬಗ್ಗೆ ಆತ್ಮೀಯತೆ ಬೆಳೆಸಿಕೊಳ್ಳಬೇಕು ಎಂದರು.

ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಭಾರತದ ದೇಶದ ಭಾಷೆ ಸಂಸ್ಕತವಾಗಿದೆ. ಇದನ್ನು ಕಲಿಯಲು ಎಲ್ಲರೂ ಮನಸ್ಸು ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಉದ್ಯಮಿ ವಿಕ್ರಮ ಶಿರೂರ ಮಾತನಾಡಿ, ಸಂಸ್ಕೃತವು ಎಲ್ಲ ಭಾಷೆಗಳ ತಾಯಿ. ನಾವೆಲ್ಲರೂ ಇದನ್ನು ಮಾತನಾಡಲು ಆರಂಭಿಸಿದರೆ ವಿಶ್ವದ ಭಾಷೆಯಾಗಿ ಹೊರಹೊಮ್ಮಲಿದೆ. ಆಗ ಭಾಷೆ ಹೆಸರಲ್ಲಿ ಗಡಿ ಸಮಸ್ಯೆಗಳು ಸಹ ಇರುವುದಿಲ್ಲ ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ಕನ್ವೇಯರ್ಸ್ ಸಿಸ್ಟಂನ ವ್ಯವಸ್ಥಾಪಕ ನಿರ್ದೇಶಕ ಮಹಾದೇವ ಕರಮರಿ, ವಾಣಿಜ್ಯಕರ ವಿಭಾಗದ ನಿವೃತ್ತ ಉಪಾಯುಕ್ತ ಗೋವಿಂದಪ್ಪ ಗೌಡಪ್ಪಗೋಳ ಮಾತನಾಡಿದರು.

ನಾರಾಯಣ ಯಾಜಿ, ದತ್ತಾತ್ರೇಯ ಮುತಾಲಿಕ, ಶಿವರಾಮ ಕುಲಕರ್ಣಿ, ಶ್ರೀಪಾದ ಹೆಗಡೆ, ಡಾ. ಸುಭಾಸ ಬಬ್ರೂವಾಡ ಇತರರು ಇದ್ದರು.

ಸಂಸ್ಕೃತ ಭಾರತಿ ಹುಬ್ಬಳ್ಳಿ ಘಟಕದ ಅಧ್ಯಕ್ಷ ಮುಕುಂದ ಜಠಾರ ಸ್ವಾಗತಿಸಿದರು. ಸತೀಶ ಮೂರೂರು ಕಾರ್ಯಕ್ರಮ ನಿರೂಪಿಸಿದರು.