ಹಾಸನ: ಭಾರತೀಯ ಸಂಸ್ಕೃತಿ ಮತ್ತು ಅದರ ತಳಹದಿಯ ಚಿಂತನೆಗೆ ವಿಶ್ವಮಾನ್ಯತೆಯಿದ್ದು, ಅದನ್ನು ಅರಿಯಬೇಕಾದರೆ ಸಂಸ್ಕೃತದ ಅಧ್ಯಯನ ಅವಶ್ಯ ಎಂದು ಹಾಸನ ಕ್ಷೇತ್ರದ ಶಾಸಕ ಸ್ವರೂಪ್‌ಪ್ರಕಾಶ್ ಅಭಿಪ್ರಾಯಪಟ್ಟರು.
ನಗರದ ಸಂಸ್ಕೃತ ಸಂಘ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಸಂಸ್ಕೃತಿಗೆ ವಿಶಿಷ್ಟ ಸ್ಥಾನವಿದ್ದು, ಅದನ್ನು ನಾವು ಆಚರಣೆಯಲ್ಲಿ ಇರಿಸಿಕೊಳ್ಳುವ ಮೂಲಕ ಇತರರಿಗೆ ತಿಳಿಸಿಕೊಡಬೇಕಾಗಿದ. ಪ್ರಾಚೀನ ಸಾಹಿತ್ಯದಲ್ಲಿ ಇಂದಿನ ವಿಜ್ಞಾನ ತಿಳಿಸಿಕೊಡುವ ಅಂಶಗಳು ಸೂಚ್ಯವಾಗಿ ಸೂತ್ರದ ರೂಪದಲ್ಲಿರುವುದನ್ನು ಗಮನಿಸಬಹುದು ಎಂದರು.
ಆ ಕಾಲದಲ್ಲಿ ಋಷಿಮುನಿಗಳ ದಾರ್ಶನಿಕ ದೃಷ್ಟಿಕೋನದಿಂದ ಕೂಡಿರುವ ಮಹತ್ವದ ಗ್ರಂಥಗಳಿವೆ. ಅಂತಹ ಗ್ರಂಥಗಳ ಸಂಶೋಧನೆ ಮತ್ತು ಅಧ್ಯಯನಗಳು ಹೆಚ್ಚು ನಡೆಯಬೇಕು. ನಮ್ಮ ಭಾಷೆಯಲ್ಲಿರುವ ಪದಗಳು ಪ್ರತಿಶತ ಎಂಬತ್ತರಷ್ಟು ಸಂಸ್ಕೃತವೇ ಆಗಿರುವುದರಿಂದ ಸಂಸ್ಕೃತದಲ್ಲಿ ಮಾತನಾಡಿದ್ದನ್ನು ನಾವು ಸುಲಲಿತವಾಗಿ ಆರ್ಥ ಮಾಡಿಕೊಳ್ಳಬಹುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಂ.ಎಸ್. ಶ್ರೀಕಂಠಯ್ಯ ಮಾತನಾಡಿ, ಹಾಸನ ಸಂಸ್ಕೃತ ಸಂಘಕ್ಕೆ 64 ವರ್ಷಗಳ ಸುದೀರ್ಘ ಇತಿಹಾಸವಿದ್ದು, ಇಲ್ಲಿ ಅಧ್ಯಯನ ಮಾಡಿದವರು ಸುಸಂಸ್ಕೃತರೂ, ವಿದ್ಯಾವಂತರು ಆಗಿ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಸಂಘದಲ್ಲಿ ಸಂಸ್ಕೃತ ಪಾಠ, ಯೋಗ, ಚಿತ್ರಕಲೆ, ಸಂಗೀತ ಎಲ್ಲಾ ಚಟುವಟಿಕೆಗಳ ಪೂರ್ಣಪ್ರಯೋಜನವನ್ನು ಜನರು ಪಡೆಯುವಂತೆ ತಿಳಿಸಿದರು.
ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಜಿಲ್ಲೆಯ ಸಂಸ್ಕೃತ ಪಾಠಶಾಲೆಯ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕ ಗಳಿಸಿದ 56 ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಪರಮೇಶ್ವರ ವಿ. ಭಟ್ಟ, ಪ್ರಣವ್ ಭಾರದ್ವಾಜ್, ಲಕ್ಷ್ಮೀ, ಸುಧನ್ವ , ಧನುಷ್ ಇದ್ದರು.