ಜಿಲ್ಲೆ

ಸಂಸ್ಕೃತ ಭಾಷೆಯಲ್ಲಿದೆ ಜ್ಞಾನ ಭಂಡಾರ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೆಲವು ಸಂಸ್ಕೃತವನ್ನು ತಿರಸ್ಕರಿಸುತ್ತಾರೆ. ಆದರೆ ಅದರಲ್ಲಿ ಜ್ಞಾನದ ಭಂಡಾರವಿದೆ ಎಂಬುದನ್ನು ಮನಗಾಣಬೇಕು. ಸಂಸ್ಕೃತದ ಮಹತ್ವ ತಿಳಿಯದೆ ಒಂದು ಜಾತಿಯವರು ಮಾತ್ರ ಮಾತನಾಡುತ್ತಾರೆ ಎಂಬ ಕಾರಣಕ್ಕೆ ಭಾಷೆಯನ್ನು ಕಡೆಗಣಿಸುವುದು ಸರಿಯಲ್ಲ ಎಂದು ವಿಧಾಸಭೆ ಮಾಜಿ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿಪ್ರಾಯಪಟ್ಟರು.
ನಗರದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಸಂಸ್ಕೃತ ಪಾಠಶಾಲೆಯ 135ನೇ ವರ್ಷಾಚರಣೆ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದ ಅವರು, ಶಿಕ್ಷಣ ಸಂಸ್ಥೆಗಳು ವ್ಯಾಪಾರಿ ಕೇಂದ್ರಗಳಾಗದೆ ಜ್ಞಾನದ ಕೇಂದ್ರಗಳಾಗಬೇಕು. ಧರ್ಮ, ಸಂಸ್ಕೃತಿ ರಕ್ಷಣೆಗೆ ಎಲ್ಲರೂ ತಮ್ಮ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದರು.
ವಿದೇಶಿ ದಾಳಿಕೋರರು ನಮ್ಮ ದೇಶದ ವಿಶ್ವ ವಿದ್ಯಾಲಯಗಳಿಗೆ ಬೆಂಕಿ ಇಟ್ಟು, ಪುಸ್ತಕ ರಾಶಿಯನ್ನು ಬೂದಿ ಮಾಡಿದರೂ ಸಾಧಕರು, ಋಷಿ-ಮುನಿಗಳು ಜ್ಞಾನದ ಸಂಪತ್ತು ಉಳಿಸಿಕೊಂಡು ಬಂದಿದ್ದರಿಂದ ಪ್ರಸ್ತುತ ಭಾರತ ವಿಶ್ವ ಗುರುವಾಗುವತ್ತ ಸಾಗುತ್ತಿದೆ ಎಂದರು.
ಜ್ಞಾನದ ವಿಶೇಷತೆಯಿಂದ ಇಡೀ ವಿಶ್ವವೇ ಭಾರತದತ್ತ ನೋಡುತ್ತಿದೆ. ಸಾಧಕರ ಕಾರಣದಿಂದ ನಾವು ಇಂತಹ ಅಪೂರ್ವ ಜ್ಞಾನ ವಿಶೇಷತೆ ಉಳಿಸಿಕೊಂಡಿದ್ದೇವೆ. ಸಂಸ್ಕೃತಿಯ ರಕ್ಷಣೆಯಲ್ಲಿ ಸಂಸ್ಕೃತ ಪ್ರಮುಖ ಪಾತ್ರ ವಹಿಸುತ್ತದೆ. ಸಂಸ್ಕೃತಿ, ಸಂಸ್ಕೃತ ಉಳಿಸಿ ಬೆಳೆಸಿ ಯುವ ಪೀಳಿಗೆಗೆ ಹಸ್ತಾಂತರಿಸಬೇಕು. ಈ ಕಾರ್ಯವನ್ನು ಸಂಸ್ಕೃತ ಪಾಠಶಾಲೆ ಸ್ವಾತಂತ್ರೃ ಪೂರ್ವದಿಂದಲೂ ಮಾಡುತ್ತಿದೆ. ಸರ್ಕಾರದ ನೆವಿಲ್ಲದೆ ಜನರು ನೀಡಿದ ದೇಣಿಗೆಯಿಂದ ಪಾಠ ಶಾಲೆಯನ್ನು 135ವರ್ಷಗಳಿಂದ ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಪಾಠಶಾಲೆ ಪ್ರಾಂಶುಪಾಲ ಪಂ. ರಾಜೇಶ್ವರ ಶಾಸ್ತ್ರಿಗಳು, ಪಾಠಶಾಲೆ ಅಧ್ಯಕ್ಷ ರಾಜೀವ ಪಾಟೀಲಕುಲಕರ್ಣಿ, ಇತರರು ಇದ್ದರು. ವಾಚಸ್ಪತಿ ಶಾಸ್ತ್ರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಶೇಖರ ಶಾಸ್ತ್ರಿಗಳು ವಾರ್ಷಿಕ ವರದಿ ವಾಚಿಸಿದರು.