ಮೈಸೂರು: ಪ್ರಪಂಚದ ಭಾಷೆಗಳಲ್ಲಿ ಸಂಸ್ಕೃತ ಭಾಷೆ ಮತ್ತು ಅದರಲ್ಲಿನ ಜ್ಞಾನಕ್ಕೆ ಸಾಟಿಯಾದದ್ದು ಮತ್ತೊಂದಿಲ್ಲ. ಸಂಸ್ಕೃತ ಭಾಷೆ ಒಂದು ಸುಂದರವಾದ ಆಭರಣವಿದ್ದಂತೆ. ಅದನ್ನು ಧರಿಸುವುದರಿಂದ ಬದುಕಿನ ಸೌಂದರ್ಯವು ಇಮ್ಮಡಿಸುತ್ತದೆ ಎಂದು ಸಂಸ್ಕೃತ ವಿದ್ವಾಂಸ ಎಚ್.ವಿ. ನಾಗರಾಜರಾವ್ ಹೇಳಿದರು.
ನಗರದ ಕೆಎಸ್‌ಎಸ್ ಸಂಸ್ಕೃತ ಪಾಠಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಂಸ್ಕೃತ ಭಾಷಾ ಕೌಶಲವರ್ಧನಾ ವಸತಿ ತರಬೇತಿ ಶಿಬಿರದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಕೃತ ಭಾಷೆ ಕಲಿಕೆಗೆ ಯಾವುದೇ ಲಿಂಗ-ಜಾತಿ-ವರ್ಗ-ಧರ್ಮ ಭೇದಗಳಿಲ್ಲ. ಸಮಾಜದಲ್ಲಿ ಎಲ್ಲರೂ ಅವರವರ ಆಸಕ್ತಿಯಂತೆ ಭಾಷೆ ಕಲಿಯುತ್ತಿದ್ದಾರೆ. ಅದರಂತೆ ಒಂದು ಕಾಲದಲ್ಲಿ ವಿವಿಧ ಕ್ಷೇತ್ರದ ಹಿರಿಯರು ಸಂಸ್ಕೃತ ಭಾಷೆ ಶ್ರದ್ಧೆಯಿಂದ ಕಲಿತಿದ್ದಾರೆ. ಕೆಲವರು ಇಂದಿಗೂ ಕಲಿಯುತ್ತಿದ್ದಾರೆ ಎಂದರು.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಮುಖ್ಯ ಕಾರ್ಯನಿರ್ವಾಹಕ ಪ್ರೊ.ಬಿ.ವಿ.ಸಾಂಬಶಿವಯ್ಯ ಮಾತನಾಡಿ, ಸಂಸ್ಕೃತವನ್ನು ನೂರಾರು ಮಹಾಕವಿಗಳು, ದಾರ್ಶನಿಕರು ಸಮೃದ್ಧಗೊಳಿಸಿದ್ದಾರೆ ಎಂದು ಹೇಳಿದರು.
ಭಾರತದ ಪ್ರಾದೇಶಿಕ ಭಾಷೆಗಳ ಪಂಡಿತರೆಂದರೆ ಅವರು ಸಂಸ್ಕೃತವನ್ನು ತಿಳಿದವರೆ ಆಗಿರುತ್ತಿದ್ದರು. ಇದು ಕನ್ನಡಕ್ಕೂ ಅನ್ವಯವಾಗುವ ಮಾತಾಗಿದೆ. ಹೊಸಗನ್ನಡ ಸಾಹಿತ್ಯದಲ್ಲಿ ಕಾಣಿಸಿಕೊಳ್ಳುವ ಅನೇಕರು ಸಂಸ್ಕೃತ, ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಾವೀಣ್ಯತೆ ಹೊಂದಿದ್ದರು.
ಆ ದೆಸೆಯಲ್ಲಿ ಆಲೋಚಿಸಿ ಸಂಸ್ಕೃತವನ್ನು ಕಲಿಯುವತ್ತ ಮನಸ್ಸು ಮಾಡಬೇಕು. ಆ ಕಾರಣದಿಂದಲೇ ಜಗದ್ಗುರುಗಳವರ ಆಶಯದಂತೆ ಡಾ. ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಸಂಸ್ಕೃತ ಸಂಶೋಧನಾ ಕೇಂದ್ರ 2001ರಿಂದ ಕಾರ್ಯ ನಿರ್ವಹಿಸುತ್ತಿದೆ ಎಂದರು
ಜೆಎಸ್‌ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಅಭಿವೃದ್ಧಿ ವಿಭಾಗದ ನಿರ್ದೇಶಕ ಕೆ.ಎಲ್.ರೇವಣ್ಣಸ್ವಾಮಿ, ಜೆಎಸ್‌ಎಸ್ ಕಾಲೇಜಿನ ಪ್ರಾಂಶುಪಾಲ ಡಾ.ಎಂ. ಪ್ರಭು ಮಾತನಾಡಿದರು. ಡಾ.ಬಿ.ಪಿ.ಷಡಕ್ಷರಿ, ಡಾ.ಎಂ.ಎಸ್.ಕೋಮಲ ಉಪಸ್ಥಿತರಿದ್ದರು.