ವಿಜಯವಾಣಿ ಸುದ್ದಿಜಾಲ ಧಾರವಾಡ
ವೀರಶೈವ ಧರ್ಮ ಪರಂಪರೆಯಲ್ಲಿ ರುದ್ರಾಕ್ಷಿಗೆ ಪವಿತ್ರ ಸ್ಥಾನವಿದೆ. ರುದ್ರಾಕ್ಷಿ ಧಾರಣೆಯಿಂದ ಹೃದಯಾಘಾತದಿಂದ ಪಾರಾಗಬಹುದು ಎಂದು ವೈಜ್ಞಾನಿಕವಾಗಿ ನಿರೂಪಣೆಯಾಗಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಶ್ರೀ ವಿಮಲ ರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಮಹಾಶಿವರಾತ್ರಿಗೆ ಹಮ್ಮಿಕೊಂಡಿರುವ ಲಕ್ಷ ರುದ್ರಾಕ್ಷಿ ಅಭಿಯಾನ ನಿಮಿತ್ತ ನಗರದ ಸೋಮೇಶ್ವರ ದೇವಸ್ಥಾನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲೆಯ ವಿವಿಧ ದೇವಸ್ಥಾನಗಳಿಗೆ ರುದ್ರಾಕ್ಷಿ ಸಂಸ್ಕಾರ ಬುತ್ತಿ ವಿತರಣಾ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ವೀರಶೈವ ಧರ್ಮದ ಚಿಹ್ನೆಗಳಾದ ವಿಭೂತಿ, ರುದ್ರಾಕ್ಷಿ, ಇಷ್ಟಲಿಂಗವನ್ನು ಪ್ರತಿಯೊಬ್ಬ ವೀರಶೈವ ಲಿಂಗಾಯತ ಧರಿಸಬೇಕು. ಸಂಸ್ಕಾರವಂತರಾಗಿ ಸಮಾಜಕ್ಕೆ ಮಾರ್ಗದರ್ಶನ ಮಾಡಬೇಕು. ವೀರಶೈವ ಧರ್ಮದ ಎಲ್ಲ ಸಮುದಾಯದ ಜನರಿಗೂ ಧರ್ಮ ಜಾಗೃತಿ, ಆಚಾರ, ವಿಚಾರ ಮತ್ತು ಪರಧರ್ಮ ಸಹಿಷ್ಣುತೆ ಮೂಡಿಸಬೇಕು ಎಂದರು.
ಮುರುಘಾಮಠ ಡಾ. ಮಲ್ಲಿಕಾರ್ಜುನ ಸ್ವಾಮೀಜಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ವಿವಿಧ ದೇವಸ್ಥಾನಗಳಿಗೆ ರುದ್ರಾಕ್ಷಿ ಸಂಸ್ಕಾರ ಬುತ್ತಿಯನ್ನು ವಿತರಿಸಿದರು. ಸಂಸ್ಥೆ ಉಪಾಧ್ಯಕ್ಷ ಮೃತ್ಯುಂಜಯ ಕೋರಿಮಠ ಅಧ್ಯಕ್ಷತೆ ವಹಿಸಿದ್ದರು.
ಉಳವಿ ಚನ್ನಬಸವೇಶ್ವರ ಟ್ರಸ್ಟ್ ಅಧ್ಯಕ್ಷ ಡಾ. ಎಸ್.ಆರ್. ರಾಮನಗೌಡರ, ಮಲ್ಲಿಕಾರ್ಜುನ ಪಾಟೀಲ, ಸೋಮೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಬಸಯ್ಯ ಬಳ್ಳಾರಿಮಠ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ, ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಕೆ.ಸಿ.ಬದ್ರಣ್ಣವರ, ಪ್ರೊ. ಮಾಲತಿ ಹಿರೇಮಠ, ಡಾ.ಎಸ್. ಜಿ. ಮಠದ, ಗಂಗಯ್ಯ ಪ್ರಭುಸ್ವಾಮಿಮಠ, ಬಸಯ್ಯ ಹಿರೇಮಠ, ಸಿ.ಸಿ.ಹಿರೇಮಠ, ಗಂಗಾಧರ ಹಿರೇಮಠ, ವಿವಿಧ ದೇವಾಲಯಗಳ ಅರ್ಚಕರು, ಮುಖ್ಯಸ್ಥರು, ಇತರರು ಇದ್ದರು.
ಇದಕ್ಕೂ ಪೂರ್ವದಲ್ಲಿ ಲಕ್ಷ ರುದ್ರಾಕ್ಷಿಗಳಿಗೆ ರುದ್ರಾಭಿಷೇಕ ಹಾಗೂ ಗಂಗಾಜಲ ಅಭಿಷೇಕ ಮಾಡಿ ನೆರವೇರಿಸಿ ಶುದ್ಧೀಕರಣಗೊಳಿಸಲಾಯಿತು.
ಪ್ರಭುಸ್ವಾಮಿ ಕೆಂಡದಮಠ ಸ್ವಾಗತಿಸಿದರು. ವೀರಶೈವ ಜಂಗಮ ಸಂಸ್ಥೆ ಮುಖ್ಯಸ್ಥ ಡಾ. ಸುರೇಶ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸುಮಿತಾ ಹಿರೇಮಠ ಹಾಗೂ ಎಂ.ಜಿ.ಹಿರೇಮಠ ನಿರೂಪಿಸಿದರು. ಪಿ.ಎಸ್. ಹಿರೇಮಠ ವಂದಿಸಿದರು.