ಅರಕಲಗೂಡು: ಯುವಜನರು ಉನ್ನತ ಜ್ಞಾನ ಸಂಪಾದಿಸಿ, ಸಂಸ್ಕಾರಯುತ ಬದುಕು ಕಟ್ಟಿಕೊಂಡು ಸಾಧನೆಗಳ ಮೂಲಕ ಜಗತ್ತನ್ನು ಬೆಳಗಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಪಟ್ಟಣದ ಕ್ರೀಡಾಂಗಣದಲ್ಲಿ ಗುರು ತೋರಿದ ದಾರಿ ತಿಂಗಳ ಮಾಮನ ತೇರು ಕಾರ್ಯಕ್ರಮದಲ್ಲಿ ಸೋಮವಾರ ಆಯೋಜಿಸಿದ್ದ ರಾಜ್ಯ ಮಟ್ಟದ ಯುವ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗುರುಗಳು, ಹಿರಿಯರ ಮಾರ್ಗದರ್ಶನದಲ್ಲಿ ಯುವಕರು ನಡೆದು ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡಾಗ ಉನ್ನತ ಸಾಧನೆ ಸಾಧ್ಯ ಎಂದು ತಿಳಿಸಿದರು.
ಆಕರ್ಷಣೆಗೆ ಬಲಿಯಾಗದಿರಿ: ಯುವಜನರು ಆಕರ್ಷಣೆಗಳಿಗೆ ಬಲಿಯಾಗದೆ, ತಮ್ಮನ್ನು ತಾವು ಶಿಸ್ತಿಗೆ ಒಳಪಡಿಸಿಕೊಂಡು ಮುನ್ನಡೆದಾಗ ಬದುಕಿನ ಸತ್ಯಗಳನ್ನು ಅರಿಯಲು ಸಾಧ್ಯವಾಗಲಿದೆ. ಯೌವನದ ದಿನಗಳು ಮುಂದಿನ ಬದುಕಿಗೆ ಭದ್ರ ಬುನಾದಿ ಹಾಕಿಕೊಳ್ಳುವ, ಸಂಭ್ರಮಿಸುವ ಸುವರ್ಣ ದಿನಗಳು. ಆದರೆ ಸಣ್ಣಪುಟ್ಟ ವಿಷಯಗಳಿಗೆ ಮನಸನ್ನು ಕೆಡಿಸಿಕೊಂಡು ಬದುಕನ್ನು ಕೊನೆಗೊಳಿಸಿಕೊಳ್ಳುವ ಪ್ರವೃತ್ತಿಗೆ ಯುವಕರು ಬಲಿಯಾಗುತ್ತಿರುವುದು ನೋವಿನ ಸಂಗತಿ. ಬಹಳಷ್ಟು ಯುವ ಜನರು ಹೆತ್ತವರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ನಿಮ್ಮ ಬದುಕನ್ನು ರೂಪಿಸಲು ಅವರು ಪಟ್ಟ ಕಷ್ಟ ಹಾಗೂ ಮಾಡಿದ ತ್ಯಾಗಕ್ಕೆ ಯಾವುದೇ ಬೆಲೆ ಕಟ್ಟಲು ಸಾಧ್ಯವಿಲ್ಲ, ಇದರ ಅರಿವಿರಬೇಕು ಎಂದು ಕಿವಿಮಾತು ಹೇಳಿದರು.
ಯುವಕರು ದೇಶದ ಆಸ್ತಿ, ಅವರು ಉತ್ತಮರಾದರೆ ಮನೆ ಜತೆಗೆ ದೇಶಕ್ಕೆ ಉತ್ತಮ ಆಸ್ತಿ ಆಗುತ್ತಾರೆ. ತನ್ನನ್ನು ತಾನು ಕಂಡುಕೊಳ್ಳಲು ಸರಳ ಮಾರ್ಗವನ್ನು ಹುಡುಕಿಕೊಳ್ಳಬೇಕು. ಬೇರೆಯವರ ಸೇವೆಗೆ ನಿನ್ನನ್ನು ತೊಡಗಿಸಿಕೊಂಡಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಇಷ್ಟು ಮಾಡಿದರೆ ಜೀವನ ಚಿನ್ನದಂತಾಗುತ್ತದೆ ಎಂದು ಮಾರ್ಗದರ್ಶನ ಮಾಡಿದರು.
ನೀನು ಸತ್ತರೂ ಬದುಕಿರುತ್ತೀಯಾ: ಲೈಫ್ ಈಸ್ ಶಾರ್ಟ್, ಆದ್ದರಿಂದ ಬೇರೆಯವರಿಗಾಗಿ ಬದುಕಬೇಕು. ಆಗ ಮಾತ್ರ ನೀನು ಸತ್ತರೂ ಬದುಕಿರುತ್ತೀಯ. ದಿನಗಳನ್ನು ಹಾಳು ಮಾಡಿಕೊಳ್ಳಬೇಡಿ. ಎಷ್ಟೋ ಜನ ಸಾಯಲು ಹೊರಟವರು ಸಾಧಕರ ಪುಸ್ತಕ, ಆತ್ಮಚರಿತ್ರೆ ಓದಿ ಆತ್ಮವಿಶ್ವಾಸದಿಂದ ಬದುಕಿ ಸಾಧಿಸಿ ತೋರಿಸಿದ್ದಾರೆ. ಆತ್ಮಹತ್ಯೆಯೊಂದೇ ಮಾರ್ಗ ಅಲ್ಲ ಎಂದು ತಿಳಿಸಿದರು.
ಯೋಚಿಸಿ ನೋಡಿದರೆ ಬದುಕಿನ ಹಲವಾರು ದಾರಿ ಸಿಗುತ್ತದೆ. ಬದುಕು ಎಲ್ಲದಕ್ಕಿಂತ ದೊಡ್ಡದು. ಎಷ್ಟೇ ಕಷ್ಟ ಬಂದರೂ ಹೆದರದೆ ಎದುರಿಸಬೇಕು. ಬದುಕನ್ನು ಬಂಗಾರ ಮಾಡಿಕೊಳ್ಳಬೇಕು. ದೇವರು ಕೊಟ್ಟಿರುವ 100 ವರ್ಷದಲ್ಲಿ ಅರ್ಧ ಆಯಸ್ಸು ರಾತ್ರಿಯಲ್ಲಿ ಮಲಗಿ ಕಳೆದು ಹೋಗುತ್ತದೆ. ಉಳಿದ ಅರ್ಧದಲ್ಲಿ ರೋಗ ರುಜಿನ, ಓದು, ಉಳಿದ ಶೇ.15 ಆಯಸ್ಸು ಮಾತ್ರ ನಿನ್ನದು. ಸಮಾಜದಲ್ಲಿ ದಾರಿ ತಪ್ಪಿಸಲು ಹಲವಾರು ಸೆಳೆತಗಳಿವೆ. ಆದರೆ ಸಾಧಿಸುವ ಗುರಿಯಿದ್ದರೆ ಇವು ಅಡ್ಡ ಬರುವುದಿಲ್ಲ. ಅಂದುಕೊಂಡ ಗುರಿ ಸಾಧಿಸಬೇಕು ಎಂದು ಹೇಳಿದರು.
ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಮಾತನಾಡಿ, ತಾಲೂಕಿನ ರಾಮನಾಥಪುರದಲ್ಲಿ ಮಠದ ವತಿಯಿಂದ ಆಶ್ರಮ ತೆರೆಯುವ ಉದ್ದೇಶವಿದೆ ಎಂದು ಹೇಳಿದರು.
ರಾಜ್ಯ ಒಕ್ಕಲಿಗರ ಅಭಿವೃದ್ಧಿ ನಿಗಮದ ನಿರ್ದೇಶಕಿ ಸುರಭಿ ಮಾತನಾಡಿ, ಆದಿಚುಂಚನಗಿರಿ ಮಹಾಸಂಸ್ಥಾನ ಮಹಿಳೆಯರ ಅಭಿವೃದ್ಧಿಗೆ ಪೂರಕವಾಗಿ ಹಲವು ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ವಿದ್ಯಾರ್ಥಿ ನಿಲಯಗಳನ್ನು ತೆರೆದು ಸಮುದಾಯದ ಹೆಣ್ಣುಮಕ್ಕಳ ಶಿಕ್ಷಣಕ್ಕೆ ನೆರವಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಮಾತನಾಡಿ, ಸಂಘವು ಹಾಸನದಲ್ಲಿ ಪ್ರಾರಂಭಿಸಿರುವ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ 800 ವಿದ್ಯಾರ್ಥಿನಿಯರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಿದೆ. ಇವರಿಗೆ ಕಡಿಮೆ ವೆಚ್ಚದಲ್ಲಿ ಊಟದ ವ್ಯವಸ್ಥೆ ಮಾಡುವ ಗುರಿ ಇದ್ದು ಇದಕ್ಕೆ ಶ್ರೀಮಠದ ಸಹಾಯ ಹಸ್ತ ಅಗತ್ಯವಿದೆ ಎಂದರು.
ಅಂತಾರಾಷ್ಟ್ರೀಯ ವೇಟ್‌ಲಿಫ್ಟರ್ ತಾಲೂಕಿನ ಬನ್ನೂರು ಗ್ರಾಮದ ಉಷಾ ಹಾಗೂ ಅಂತಾರಾಷ್ಟ್ರೀಯ ಕುಬ್ಜ ಕ್ರೀಡಾಪಟು ಕೆ.ಆರ್.ಶಾಂತಕುಮಾರ್ ಹಾಗೂ 45 ಪೌರಕಾರ್ಮಿಕರನ್ನು ಗೌರವಿಸಲಾಯಿತು. ವಿವಿಧ ಮಠಾಧೀಶರು, ಶಾಸಕ ಎ.ಟಿ. ರಾಮಸ್ವಾಮಿ, ಮಾಜಿ ಸಚಿವ ಎ. ಮಂಜು, ಕಾಂಗ್ರೆಸ್ ಮುಖಂಡರಾದ ಎಂ.ಟಿ. ಕೃಷ್ಣೇಗೌಡ, ದಿನೇಶ್ ಭೈರೇಗೌಡ, ತಾಲೂಕು ಮಹಿಳಾ ಒಕ್ಕಲಿಗರ ಸಂಘದ ಅಧ್ಯಕ್ಷೆ ಎಚ್.ಎಸ್.ರಶ್ಮಿ, ತಾಲೂಕು ಯುವ ಒಕ್ಕಲಿಗರ ಸಂಘದ ಅಧ್ಯಕ್ಷ ಅನಿಲ್‌ಗೌಡ, ಪಪಂ ಮಾಜಿ ಅಧ್ಯಕ್ಷ ನಂದಕುಮಾರ್, ನಿವೃತ್ತ ಇಂಜಿನಿಯರ್ ಮರಡಿ ಸೋಮಶೇಖರ್, ಮುಖಂಡ ಪ್ರದೀಪ್ ರಾಮಸ್ವಾಮಿ, ಬಿಜಿಎಸ್ ಕಾಲೇಜು ಪ್ರಾಂಶುಪಾಲ ಮಹೇಶ್ ಹೊಡೆನೂರು, ಮದನ್‌ಗೌಡ, ಮೋಹನ್ ಕುಮಾರ್, ಲೋಕೇಶ್, ಕಾವೇರಿ, ಶೈಲೇಶ್ ಇತರರು ಇದ್ದರು.