ಜಿಲ್ಲೆ

ಸಂಸ್ಕಾರದಿಂದಲೇ ಸಮಾಜಕ್ಕೆ ಶಾಂತಿ, ನೆಮ್ಮದಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಮನುಷ್ಯನಾಗಿ ಜನಿಸಿದ ಪ್ರತಿ ವ್ಯಕ್ತಿಯೂ ಸಂಸ್ಕಾರವಂತನಾಗುವುದು ಬಹು ಮುಖ್ಯ. ಸಂಸ್ಕಾರದಿಂದಲೇ ಸಮಾಜದಲ್ಲಿ ಶಾಂತಿ, ನೆಮ್ಮದಿ ಸಾಧ್ಯ ಎಂದು ಸುಳ್ಳ ಗ್ರಾಮದ ಪಂಚಗೃಹ ಹಿರೇಮಠ ಪಟ್ಟಾಧ್ಯಕ್ಷ ಶ್ರೀ ಶಿವಸಿದ್ದರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಉಳವಿ ಚನ್ನಬಸವೇಶ್ವರ ದೇವಸ್ಥಾನ ಆವರಣದಲ್ಲಿ ಧಾರವಾಡ ವೀರಶೈವ ಜಂಗಮ ಸಂಸ್ಥೆ ಭಾನುವಾರ ಆಯೋಜಿಸಿದ್ದ ಜಂಗಮ ಮಕ್ಕಳಿಗೆ ವೈದಿಕ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದಲ್ಲಿ ಸಾಮರಸ್ಯ, ಸಹೋದರತ್ವ, ಭಾವೈಕ್ಯತೆ ಬೆಳೆಯಲು ಸಹನೆ, ವಿನಯ ಮತ್ತು ಪರಸ್ಪರ ಪ್ರೀತಿ ವಿಶ್ವಾಸದಿಂದ ಕಾಣುವುದು ಮುಖ್ಯ. ಈ ಸದ್ಗುಣಗಳನ್ನು ಎಲ್ಲರೂ ಹೊಂದಬೇಕು. ವೀರಶೈವ ಲಿಂಗಾಯತ ಸಂಸ್ಕೃತಿಯು ಕೂಡಿ ಬಾಳುವ ಗುಣ ಹೊಂದಿದೆ. ಅದು ಇಡೀ ಮಾನವಕುಲದ ಹಿತ ಬಯಸುತ್ತದೆ ಎಂದರು.
ಸಂಸ್ಕಾರದಲ್ಲಿ ಹೆಣ್ಣು-ಗಂಡು ಅಥವಾ ಜಾತಿ ಭೇಧಗಳಿಲ್ಲ. ಆದಿ ಜಗದ್ಗುರು ಪಂಚಾಚಾರ್ಯರು ಬಹು ಹಿಂದೆಯೇ ಅನೇಕ ಸಮುದಾಯದ ಜನರಿಗೆ ಶಿವದೀಕ್ಷೆ ನೀಡಿದ್ದಾರೆ. ಇವತ್ತಿಗೂ ಎಲ್ಲ ಮಠ ಮಾನ್ಯಗಳಲ್ಲಿ ಶಿವ ಸನ್ನಧಿ ಬಯಸಿ ಬರುವವರಿಗೆ ಶಿವದೀಕ್ಷೆ ನೀಡಲಾಗುತ್ತಿದೆ. ಸಮಾಜದಲ್ಲಿ ಶಾಂತಿ ಭಂಗ ಮಾಡುವರ ಬಗ್ಗೆ ಎಚ್ಚರವಿರಬೇಕು. ಪರಸ್ಪರ ಕೂಡಿ ಬಾಳುವುದರಿಂದ ಪ್ರತಿಯೊಬ್ಬರ ಹಿತ ಸಾಧಿಸಿ, ಸನ್ಮಾರ್ಗದಲ್ಲಿ ನಡೆಯಲು ಸಾಧ್ಯ ಎಂದರು.
ಉದ್ಯಮಿಗಳಾದ ಬಸಯ್ಯ ಕಾಡಯ್ಯ ಹಿರೇಮಠ, ಜಗದೀಶ ಹಿರೇಮಠ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆ ನಿರ್ದೇಶಕಿ ಸುಮಿತಾ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಹೆಣ್ಣು ಮಕ್ಕಳಿಗೆ ಶಿವದೀಕ್ಷೆ ನೀಡಲಾಯಿತು. ಮಂತ್ರೊಪದೇಶದೊಂದಿಗೆ ಇಷ್ಟಲಿಂಗ ಪೂಜಾ ವಿಧಿ ವಿಧಾನಗಳನ್ನು ಪ್ರಾತ್ಯಕ್ಷಿಕೆ ಮೂಲಕ ನೀಡಲಾಯಿತು.
ಬಸವರಾಜ ಜೀವಣ್ಣವರ, ಶಂಕ್ರಯ್ಯ ಮಠಪತಿ, ಮಂಜುನಾಥ ಬೆಳ್ಳಂಕಿಮಠ, ಸಂಗಯ್ಯ ಯರಗಂಬಳಿಮಠ, ರುದ್ರಯ್ಯ ಹೊಸಮಠ, ಗಂಗಾಧರ ಹಿರೇಮಠ, ಶಶಿಧರ ಗಂಧದ, ಶಿವಲಿಂಗಯ್ಯ ಹಿರೇಹಾಳ, ಶಿವಪುತ್ರಯ್ಯ ಮಠಪತಿ, ಅನುಷಾ ಹಿರೇಮಠ, ಪ್ರೊ.ಮಾಲತಿ ಹಿರೇಮಠ, ಡಾ.ಎಸ್.ಜಿ.ಮಠದ, ಡಾ. ಜಗದೀಶ ಕಾಡದೇವರಮಠ, ಶರಣಬಸಯ್ಯ ಕುರ್ತಕೋಟಿ, ಇತರರು ಇದ್ದರು.
ಪಂಚಾಕ್ಷರಯ್ಯ ಹಿರೇಮಠ ಸ್ವಾಗತಿಸಿದರು. ಪ್ರಭು ಕೆಂಡದಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಂ.ಜಿ. ಹಿರೇಮಠ ನಿರೂಪಿಸಿದರು. ಬಸಯ್ಯಶಾಸ್ತ್ರಿ ಹಿರೇಮಠ ವಂದಿಸಿದರು.