ಗದಗ: ಸದೃಢ ಸಮಾಜ ಕಟ್ಟುವಲ್ಲಿ ಮಹಿಳೆಯರ ಪಾತ್ರ ಬಹಳ ಮಹತ್ವದ್ದು ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ. ಸಂದೇಶ ಹೇಳಿದರು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ವಕೀಲರ ಸಂಘ, ಪದವಿಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಂದಿರು ಪ್ರಮುಖ ಪಾತ್ರ ವಹಿಸುತ್ತಾರೆ. ಮಕ್ಕಳಿಗೆ ವಿದ್ಯೆ ಮತ್ತು ಸಂಸ್ಕಾರವನ್ನು ನೀಡುವುದರ ಮೂಲಕ ಸತ್ಪ್ರಜೆಯನ್ನಾಗಿಸುವುದು ಪ್ರತಿಯೊಬ್ಬ ತಾಯಿಯ ಕರ್ತವ್ಯವಾಗಿದೆ. ಮಕ್ಕಳನ್ನು ಶಾಲೆಗೆ ಕಳುಹಿಸುವುದರ ಜತೆಗೆ ಅವರ ಚಲನವಲನ ಗಮನಿಸಬೇಕಾಗುತ್ತದೆ ಎಂದರು.
ಮಹಿಳೆಯರ ಸಾಧನೆಗೆ ವಯೋಮಿತಿಯಿಲ್ಲ. ಪ್ರತಿಯೊಬ್ಬರೂ ಶ್ರದ್ಧೆ, ಶ್ರಮ, ಸಮಯಪ್ರಜ್ಞೆ, ನಿರ್ಭಯತೆ ಮತ್ತು ಆತ್ಮವಿಶ್ವಾಸ ಎಂಬ ಪಂಚ ಸೂತ್ರಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ಕಾಣಬಹುದು ಎಂದು ಹೇಳಿದರು.
ಭ್ರಷ್ಟಾಚಾರ ನಿಮೂಲನೆಯ ಕಾರ್ಯ ಮನೆಯಿಂದಲೇ ಆರಂಭವಾಗಬೇಕಿದೆ ಎಂದು ಸಲಹೆ ನೀಡಿದರು. ಮಧು ಲೋಕಾಪುರ ಅವರು ಸ್ವಚ್ಛ ಭಾರತ ಅಭಿಯಾನದ ಕುರಿತು ಪ್ರತಿಜ್ಞಾ ವಿಧಿ ಬೋಧಿಸಿದರು.
ಜಿಪಂ ಸಿಇಒ ಡಾ. ಆನಂದ.ಕೆ ಮಾತನಾಡಿ, ಮಕ್ಕಳನ್ನು ಲಿಂಗತಾರತಮ್ಯವಿಲ್ಲದೇ ಬೆಳೆಸಬೇಕು ಎಂದರು. ಹೆಣ್ಣು ಮಕ್ಕಳ ರಕ್ಷಣೆ, ಪೋಷಣೆ, ಲಿಂಗಾನುಪಾತ ವ್ಯತ್ಯಾಸ ಸರಿಪಡಿಸುವುದು, ಹೆಣ್ಣು ಭ್ರೂಣಹತ್ಯೆ ತಡೆ ಕಾಯ್ದೆ ಅನುಷ್ಠಾನ, ಹೆಣ್ಣು ಮಕ್ಕಳ ಶಿಕ್ಷಣ ಒದಗಿಸುವ ಪಾಲನೆ ಕುರಿತು ಗದಗ ಜಿಲ್ಲೆಯ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಜಿ.ಎಚ್. ಸಂಗ್ರೇಶಿ ಮಾತನಾಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಾ. ಎಚ್.ಎಚ್. ಕುಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎನ್.ಎಚ್. ನಾಗೂರ ಮಹಿಳೆಯ ಕುರಿತು ಕವನ ವಾಚನ ಮಾಡಿದರು. ಕವಿತಾ ಕಾಶಪ್ಪನವರ ಅವರು ಮಹಿಳೆ ಮತ್ತು ಶಿಕ್ಷಣ ಕುರಿತು ಉಪನ್ಯಾಸ ನೀಡಿದರು.
ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಕಿರಿಯ ವಯಸ್ಸಿನಲ್ಲಿ ನ್ಯಾಯಾಧೀಶ ಹುದ್ದೆ ಅಲಂಕರಿಸಿದ ರೂಪಾ ವಗ್ಗಾ, ಕಿರಿಯ ವಯಸ್ಸಿನಲ್ಲಿ ಡಾಕ್ಟ್ರೇಟ್ ಪದವಿ ಪಡೆದ ವೈದೃತಿ ಕೋರಿಶೆಟ್ಟರ್, ಡಾ. ಸುಜಾತಾ ಪಾಟೀಲ, ರೇಣುಕಾ ಚೆಲುವಾದಿ, ಜಿಲ್ಲಾಸ್ಪತ್ರೆಯ ನಿಂಗವ್ವ ಪೂಜಾರ, ಪೌರಕಾರ್ವಿುಕ ನಾಗವ್ವ ತೌಜಲ್, ಕುಸ್ತಿಪಟು ಪ್ರೇಮಾ ಹುಚ್ಚಣ್ಣವರ, ಆರೋಗ್ಯ ಇಲಾಖೆಯ ಡಾ.ಶರಣಮ್ಮ ಓಣಿ, ಶಿಕ್ಷಕಿಯರಾದ ಗಿರಿಜವ್ವ ಅತ್ತಿಗೇರಿ, ಶಕುಂತಲಾ ಗಾಣಿಗೇರ, ಪೊಲೀಸ್ ಇಲಾಖೆಯ ಕೆ.ವೈ. ದೊಡ್ಡಮನಿ, ಅಂಗನವಾಡಿಯ ಶಾಂತವ್ವ ಕಳ್ಳನಾಯ್ಕರ, ಸಾಹಿತ್ಯ, ಕಲೆಗಾಗಿ ಗೀತಾ ಹೂಗಾರ ಅವರನ್ನು ಸನ್ಮಾನಿಸಲಾಯಿತು.
ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶೆ ರೂಪಾ ನಾಯ್ಕ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್, ಅಪರ ಜಿಲ್ಲಾಧಿಕಾರಿ ಸತೀಶಕುಮಾರ ಎಂ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ನಗರಸಭೆ ಪೌರಾಯುಕ್ತ ಮನ್ಸೂರ ಅಲಿ, ತಹಸೀಲ್ದಾರ್ ಶ್ರೀನಿವಾಸಮೂರ್ತಿ ಕುಲಕರ್ಣಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವಿ.ಬಿ. ಹುಬ್ಬಳ್ಳಿ ಮತ್ತಿತರರು ಇದ್ದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಜಿ. ಸಲಗರೆ ಸ್ವಾಗತಿಸಿದರು. ಅಭಿನೇತ್ರಿ ರೇವಣಕರ ಪ್ರಾರ್ಥಿಸಿದರು. ಶಹನಾಜ್ ತೆಗ್ಗಿನಮನಿ ನಿರೂಪಿಸಿದರು.
EndFragment