ಜಿಲ್ಲೆ

ಸಂಸ್ಕಾರದ ಕೊರತೆಯಿಂದ ಗುರು ಹಿರಿಯರ ಬಗ್ಗೆ ಸಮಾಜ ಅಸಡ್ಡೆಯಿಂದ ವರ್ತಿಸುತಿದೆ.

ಬೇಲೂರು: ಬೇಲೂರು ತಾಲೂಕಿನ ದೊಡ್ಡಿಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀಬಸವೇಶ್ವರ ದೇವಸ್ಥಾನ ಹಾಗೂ ಶ್ರೀ ಕರಿ ವೃಷಭ ದೇಶಿಕೇಂದ್ರ ಮಾಹಾ ಸ್ವಾಮೀಜಿಯವರ ಗದ್ದುಗೆ ಉದ್ಘಾಟನೆ ಮತ್ತು ಜಿಲ್ಲಾ ಮಟ್ಟದ ಧಾರ್ಮಿಕ ಜನ ಜಾಗೃತಿ ಸಮಾವೇಶವು ವಿವಿಧ ಮಠಾಧೀಶರ ನೇತೃತ್ವದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸೋಮವಾರ ವಿಜೃಂಬಣೆಯಿಂದ ನೆರವೇರಿತು.


ಬಸವೇಶ್ವರ ದೇವಸ್ಥಾನಕ್ಕೆ ಬ್ರಹ್ಮ ಕಳಸ ಸ್ಥಾಪಿಸಿ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಪುಷ್ಪಗಿರಿ ಮಹಾಸಂಸ್ಥಾನದ ಮಠದ ಜಗದ್ಗುರು ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ, ಅಧುನಿಕ ಕಾಲ ಘಟ್ಟದಲ್ಲಿ ಸಂಸ್ಕಾರದ ಕೊರತೆಯಿಂದ ಗುರು ಹಿರಿಯರ ಬಗ್ಗೆ ಸಮಾಜ ಅಸಡ್ಡೆಯಿಂದ ವರ್ತಿಸುತಿದ್ದು, ಈ ಬೆಳವಣಿಗೆ ಸದೃಡ ಸಮಾಜಕ್ಕೆ ಮಾರಕವಾಗಿದೆ. ಪುಷ್ಪಗಿರಿ ಮಠಕ್ಕೆ ನಾವು ಕಿರಿಯ ವಯಸ್ಸಿನಲ್ಲೇ ಪಟ್ಟಾಭಿಷೇಕವಾದ ನಂತರ ಹತ್ತಾರು ಕಹಿ ಘಟನೆಗಳಿಂದ ಮನಸ್ಸಿಗೆ ಬೇಸರ ತಂದಿತ್ತು. ಆದರೆ ಛಲದಿಂದ ಮಠದ ಸರ್ವತೋಮುಖ ಅಭಿವೃದ್ಧಿಗೆ ಪ್ರಾಮಾಣಿವಾಗಿ ಕೆಲಸ ಮಾಡಿದ್ದೇವೇ. 2020 ರಲ್ಲಿ ಪ್ರಾರಂಭವಾದ ಪುಷ್ಪಗಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಸಾವಿರಾರು ಮಹಿಳಾ ಸ್ವ ಸಹಾಯ ಸಂಘ ಸ್ಥಾಪಿಸಿ ಗ್ರಾಮೀಣ ಭಾಗದ ಮಹಿಳೆಯರ ಸಬಲೀಕರಣಕ್ಕೆ ಮುನ್ನುಡಿ ಬರೆಯಲಾಗಿದೆ. ಅಲ್ಲದೆ ಬೇಲೂರು ತಾಲೂಕಿನ ದೊಡ್ಡಿಹಳ್ಳಿ ಗ್ರಾಮವು ಐತಿಹಾಸಿಕವಾದ ಹಿನ್ನೆಲೆ ಹೊಂದಿದೆ. ಕಾರಣ ಪುಷ್ಪಗಿರಿ ಮತ್ತು ತಮ್ಮಡಿಹಳ್ಳಿ ಮಠಕ್ಕೆ 13 ಪರಮ ಪೂಜ್ಯರನ್ನು ನೀಡಿದ ಹೆಗ್ಗಳಿಕೆಗೆ ಪಾತ್ರವಾದ ಇಂತಹ ದೊಡ್ಡಿಹಳ್ಳಿ ಗ್ರಾಮದಿಂದ ಮತ್ತೊಬ್ಬರನ್ನು ಪುಷ್ಪಗಿರಿ ಮಠಕ್ಕೆ ನೀಡಲು ಗ್ರಾಮಸ್ಥರು ಮುಂದಾಗಬೇಕಿದೆ. ಇವತ್ತಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಜನರು ಧಾರ್ಮಿಕವಾಗಿ ಚಿಂತಿಸಿ ಗುರು ಹಿರಿಯರನ್ನು ಗೌರವಿಸಿ ನಮ್ಮ ಸಂಸ್ಕಾರ ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ಮುಂದಾಗಬೇಕಿದೆ ಎಂದರು.


ಚಲನ ಚಿತ್ರ ನಟ ದೊಡ್ಡಣ್ಣ ಮಾತನಾಡಿ, ಮನೆಯಲ್ಲಿಯೇ ಸಂಸ್ಕಾರ ನೀಡುವ ಕೆಲಸಕ್ಕೆ ಪೋಷಕರು ಮುಂದಾಗಬೇಕು. ಇಲ್ಲವಾದರೆ ಅನಾಥಾಶ್ರಯಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ. ಪುಷ್ಪಗಿರಿ ಮಹಾಸಂಸ್ಥಾನ ಮಠ ಇತ್ತೀಚಿನ ದಿನಗಳಲ್ಲಿ ಭೂಕೈಲಾಸವಾಗುತ್ತಿದೆ. ಇದಕ್ಕೆ ಕಾರಣ ಪುಷ್ಪಗಿರಿ ಸ್ವಾಮೀಜಿಗಳ ಕಾರ್ಯಕ್ಷಮತೆ ನಿಜಕ್ಕೂ ಅಗಮ್ಯವಾಗಿದೆ. ಶಿವ ಪುರಾಣದಲ್ಲಿ ಉಲ್ಲೇಖಿಸಿದಂತೆ ಶಿವನ ಬಗ್ಗೆ ಎಲ್ಲರೂ ಸಮಗ್ರವಾಗಿ ತಿಳಿಯಬೇಕಿದೆ. ರಾಮಾಯಣ, ಮಹಾ ಭಾರದ ಕಥೆಗಳು ಬದುಕಿಗೆ ಪೂರಕವಾಗುತ್ತದೆ. ಎಲ್ಲರೂ ಅಧ್ಯಯನ ನಡೆಸಬೇಕಿದೆ ಎಂದರು.


ಚಿಕ್ಕನಾಯಕನಹಳ್ಳಿ ತಾಲೂಕು ತಮ್ಮಡಿಹಳ್ಳಿ ವಿರಕ್ತಮಠದ ಶ್ರೀ ಡಾ.ಅಭಿನವ ಮಲ್ಲಿಕಾರ್ಜುನ ಮಹಾಸ್ವಾಮಿಜಿ ಮಾತನಾಡಿ, ದೊಡ್ಡಿಹಳ್ಳಿಯಿಂದ ತಮ್ಮಡಿಹಳ್ಳಿ ಮಠಕ್ಕೆ ಮೂವರು ಪೂಜ್ಯರನ್ನು ನೀಡಿದ ಗ್ರಾಮವನ್ನು ಎಂದಿಗೂ ಮರೆಯುವಂತ್ತಿಲ್ಲ. ದೊಡ್ಡಿಹಳ್ಳಿ ಗ್ರಾಮದಲ್ಲಿ ಗುರುಗಳ ಗುದ್ದುಗೆ ನಿರ್ಮಿಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿ, ಈ ದೊಡ್ಡಿಹಳ್ಳಿ ಗ್ರಾಮದಲ್ಲಿ ತಂದೆ ತಾಯಂದಿರು ತಮ್ಮ ಮಕ್ಕಳನ್ನ ಸಮಾಜಕ್ಕೆ ಅರ್ಪಿಸಿದ್ದಾರೆ. 13 ಜನ ಸ್ವಾಮೀಜಿಯವರನ್ನ ಕೊಟ್ಟ ಈ ಗ್ರಾಮ ನಮಗೆಲ್ಲಾ ಹೆಮ್ಮೆ ತಂದಿದೆ. ನಾವೆಲ್ಲಾ ಬಸವಣ್ಣರ ಅನುಯಾಯಿಗಳು. ಮಹಿಳೆಗೆ ಸಮಾಜದಲ್ಲಿ ಮತದ ಹಕ್ಕು ಕೊಟ್ಟಿದ್ದೆ ಬಸವಣ್ಣರವರು. ಸಮಾನ ಸ್ಥಾನ ಮಾನ ಕೊಟ್ಟ ಬಸವಾದಿ ಶರಣರು ಎಂದರು.


ಪುಷ್ಪಗಿರಿ ಮಹಾಸಂಸ್ಥಾನ ಕಾರ್ಯದರ್ಶಿ ಗ್ರಾನೈಟ್ ರಾಜಶೇಖರ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೊರಟಿಕೆರೆ ಪ್ರಕಾಶ್, ಬಿಜೆಪಿ ಮುಖಂಡ ಸಿದ್ದೇಶ ನಾಗೇಂದ್ರ, ಗ್ರಾಮದ ಮುಖಂಡ ಯಶೋಧರ, ಬಿಜೆಪಿ ತಾಲೂಕು ಅಧ್ಯಕ್ಷ ಆನಂದ್, ಪ್ರಾಧಿಕಾರದ ಮಾಜಿ ಅಧ್ಯಕ್ಷ ಬಸವರಾಜ, ಮುಖಂಡ ಗಂಗೂರು ಶಿವಕುಮಾರ್, ಅರೇಹಳ್ಳಿ ಪಿಎಸ್‌ಐ ಸುರೇಶ್, ಮುಖಂಡರಾದ ರವಿಕುಮಾರ್, ಚೇತನಕುಮಾರ್, ಹಿರಿಯಣ್ಣ, ಶ್ಯಾಮ್ ಸುಂದರ್, ಹೆಬ್ಬಾಳು ಹಾಲಪ್ಪ, ಪುಷ್ಪಗಿರಿ ಮಹಾಸಂಸ್ಥಾನ ಆಡಳಿತಾಧಿಕಾರಿ ಕಿಟ್ಟಪ್ಪ, ಸ್ವಸಹಾಯ ಸಂಘದ ಯೋಜನಾಧಿಕಾರಿ ವಿನುತ ಸೇರಿದಂತೆ ಇತರರಿದ್ದರು.