ಜಿಲ್ಲೆ

ಸಂಸ್ಕಾರ ಹೊಂದಿರುವ ಮನದ ಸೌಂದರ್ಯ ಮುಖ್ಯ

ಮೈಸೂರು: ಬಹಿರಂಗದಲ್ಲಿ ಚಂದವಾಗಿದ್ದರೆ ಸಾಲದು, ಅಂತರಂಗದಲ್ಲಿ ಒಳ್ಳೆಯ ನಡೆ, ನುಡಿ, ಸಂಸ್ಕಾರಗಳನ್ನು ಹೊಂದಿರುವ ಮನದ ಸೌಂದರ್ಯ ಮುಖ್ಯ ಎಂದು ನಿವೃತ್ತ ಪ್ರಾಧ್ಯಾಪಕ ಪ್ರೊ.ಮೊರಬದ ಮಲ್ಲಿಕಾರ್ಜುನ ಹೇಳಿದರು.


ಶ್ರಾವಣ ಮಾಸದ ಅಂಗವಾಗಿ ಸುತ್ತೂರು ಮಠದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಲಕ್ಕಣ್ಣ ದಂಡೇಶ ವಿರಚಿತ ಶಿವತ್ವ ಚಿಂತಾಮಣಿ ಕುರಿತು ಪ್ರವಚನ ನೀಡಿದರು. ಸೌಂದರ್ಯವನ್ನು ಕಣ್ಣಿನ ದೃಷ್ಟಿಯಲ್ಲಿ ನೋಡದೆ, ಮನಸ್ಸಿನ ದೃಷ್ಟಿಯಲ್ಲಿ ನೋಡಬೇಕು. ತ್ಯಾಗರಾಜರು ಜಗತ್ತಿನಲ್ಲಿ ಎಲ್ಲರೂ ಮಹಾನುಭಾವರೇ, ಎಲ್ಲರ ಕಾಯದೊಳಗೂ ಭಗವಂತನಿದ್ದಾನೆ. ಒಳ್ಳೆಯ, ಸಾತ್ವಿಕ, ಸಜ್ಜನನಾಗಬೇಕೆಂದು ಆತನು ಬಯಸುತ್ತಾನೆ. ಆದರೂ, ಮನುಷ್ಯರಾದವರು ಕಣ್ತಪ್ಪಿಸಿ ಕೆಲವು ಅಲ್ಲದ ಕೆಲಸ ಮಾಡುತ್ತಾರೆ ಎಂದು ಹೇಳಿದರು.


ಕನ್ನಡ ಕಾವ್ಯ ಪರಂಪರೆಯಲ್ಲಿ ಪಂಪ, ರನ್ನ ಮೊದಲಾದವರು ಧಾರ್ಮಿಕ ಕಾವ್ಯಗಳ ರಚನೆಯೊಂದಿಗೆ ತಮಗೆ ಆಶ್ರಯ ನೀಡಿದ ದೊರೆಗಳನ್ನೂ ಪುರಾಣಗಳಲ್ಲಿ ಸ್ಮರಿಸಿ ಅಜರಾಮರಾಗಿಸಿದ್ದಾರೆ. ಲಕ್ಕಣ್ಣ ದಂಡೇಶನು ವಿಜಯನಗರ ಸಾಮ್ರಾಜ್ಯದ ಅಧಿಪತಿಯಾಗಿದ್ದ ಹಂಪಿ ವಿರೂಪಾಕ್ಷನನ್ನು ತನ್ನ ಕಾವ್ಯದಲ್ಲಿ ಸ್ಮರಿಸಿದ್ದಾನೆ. ಅವನು ಶರಣ ಪರಂಪರೆ, ಅವರ ಧಾರ್ಮಿಕ ತತ್ವ-ಸಂದೇಶ, ಅವುಗಳ ವಿಶ್ಲೇಷಣೆಯನ್ನು ಅತ್ಯಂತ ಅರ್ಥಗರ್ಭಿತವಾಗಿ ತನ್ನ ಕಾವ್ಯದಲ್ಲಿ ಕಟ್ಟಿಕೊಟ್ಟಿದ್ದಾನೆ ಎಂದು ತಿಳಿಸಿದರು.


ಶರಣರು ಬಳಸಿದ ಶರಣು ಎಂಬ ಪದಕ್ಕೆ ಅತ್ಯಂತ ಸೂಕ್ಷ್ಮವಾದ ಭಾವ ಶ್ರೀಮಂತಿಕೆಯಿದೆ. ಒಳ್ಳೆಯವರನ್ನು ಗೌರವಿಸುವುದರಿಂದ, ಗೌರವಿಸಿದವನ ಹಿರಿತನ ಹೆಚ್ಚುತ್ತದೆ ಎಂದು ತಿಳಿಸಿದರು.


ವಿದ್ವಾನ್ ಕೃ. ರಾಮಚಂದ್ರ ಅವರು ಕಾವ್ಯ ವಾಚನ ಮಾಡಿದರು.