ಸಕಲೇಶಪುರ: ಸಂಸ್ಕಾರ ಹೊಂದಿದ ಮನುಷ್ಯನಿಗೆ ಸಮಾಜದಲ್ಲಿ ಬೆಲೆ ಹೆಚ್ಚು ಎಂದು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮಿಜಿ ಅಭಿಪ್ರಾಯಪಟ್ಟರು.
ತಾಲೂಕಿನ ಬೊಮ್ಮನಕೆರೆ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ನಂದೀಶ್ವರ ಜಾತ್ರಾ ಮಹೋತ್ಸವ ಉದ್ಘಾಟಿಸಿ ಆಶ್ರೀರ್ವಚನ ನೀಡಿದ ಅವರು, ಮಗುವಿನ ಭವಿಷ್ಯ ರೂಪಿಸುವುದು ತಾಯಿ. ತಾಯಿಯಿಂದ ಉತ್ತಮ ಸಂಸ್ಕಾರ ಕಲಿತ ಮಗು ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಬಲ್ಲ. ಮಲೆನಾಡು ಸಂಸ್ಕೃತಿಯ ಬೀಡು. ಇಂತಹ ನಾಡಿನಲ್ಲಿ ಸಂಸ್ಕಾರಕ್ಕೆ ಪೆಟ್ಟು ಬೀಳುತ್ತಿದೆ. ಪಾಲಕರು ಎಚ್ಚರಗೊಂಡು ತಮ್ಮ ಮಕ್ಕಳಿಗೆ ಸಂಸ್ಕಾರ ಕಲಿಸಬೇಕಿದೆ. ಕೆಟ್ಟದ್ದನ್ನು ಕಳೆದುಕೊಳ್ಳುವುದು ಪೂಜೆಯ ಮೂಲಕ. ಮನುಷ್ಯ ಸದ್ಭಾವನೆ ಬೆಳೆಸಿಕೊಳ್ಳುವುದು ಅಗತ್ಯವಿದೆ. ನಾವು ಯಾವ ರೀತಿ ಭಾವಿಸಿಕೊಳ್ಳುತ್ತೇವೆಯೋ ಆ ರೀತಿ ಕೆಲಸ ನಡೆಯುತ್ತದೆ. ಆದ್ದರಿಂದ, ಉತ್ತಮ ಭಾವನೆ ಬೆಳೆಸಿಕೊಳ್ಳುವುದು ಅಗತ್ಯ ಎಂದರು.
ಮನುಷ್ಯ ಧರ್ಮ ಮರೆತರೆ ಪ್ರಾಣಿಗಳಿಗೂ ಮನುಷ್ಯರಿಗೂ ವ್ಯತ್ಯಾಸ ಇರುವುದಿಲ್ಲ. ಇಂದು ಮನೆಗಳು ದೊಡ್ಡದಾಗುತ್ತಿವೆ. ಆದರೆ, ಮನಸ್ಸುಗಳು ಚಿಕ್ಕದಾಗುತ್ತಿದ್ದು ಸಂಬಂಧಗಳು ಕಣ್ಮರೆಯಾಗುತ್ತಿವೆ. ಇಂತಹ ಬದುಕಿಗೆ ಯಾವ ಅರ್ಥವೂ ಇರುವುದಿಲ್ಲ. ಆದ್ದರಿಂದ, ಸಂಬಂಧಗಳನ್ನು ಕಾಪಾಡಿಕೊಳ್ಳುವ ಮೂಲಕ ಅರ್ಥಪೂರ್ಣ ಬದುಕು ಟ್ಟಿಕೊಳ್ಳಲು ಮುಂದಾಗಿ ಎಂದು ಹೇಳಿದರು.
ಯಸಳೂರು ತೆಂಕಲಗೋಡು ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮಿಜಿ ಮಾತನಾಡಿ, ಇಡೀ ಪ್ರಪಂಚಕ್ಕೆ ಆಧ್ಯಾತ್ಮ ಬೋಧಿಸಿದ ದೇಶ ಭಾರತ, ನಮ್ಮ ದೇಶದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಮತ್ಯಾವ ದೇಶದಲ್ಲೂ ನಡೆಯುವುದಿಲ್ಲ. ಧಾರ್ಮಿಕತೆ ಎಂಬುದು ಪ್ರತಿಯೊಬ್ಬನಲ್ಲಿ ಹಾಸು ಹೊಕ್ಕಾಗಿದ್ದು, ಇದಕ್ಕೆಲ್ಲ ಸಂಸ್ಕಾರ ನೆಲೆಸಿರುವುದು ಕಾರಣ. ಧರ್ಮ, ಜಾತಿಯಲ್ಲ. ಧರ್ಮ ಎಂಬುದು ಕನ್ನಡಿ ಇದ್ದ ಹಾಗೆ. ಧರ್ಮದಿಂದ ವ್ಯಕ್ತಿತ್ವ ವೃದ್ಧಿಸಲು ಸಾಧ್ಯ. ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ವೃದ್ದಾಪ್ಯ ನೆಮ್ಮದಿಯಾಗಿರಲಿದೆ. ಆದ್ದರಿಂದ, ಮಕ್ಕಳಿಗೆ ತಪ್ಪದೆ ಸಂಸ್ಕಾರ ಕಲಿಸುವುದು ಅಗತ್ಯ ಎಂದರು.
ಕಲ್ಮಠದ ಶ್ರೀ ಮಹಾಂತ ಸ್ವಾಮಿಜಿ ಮಾತನಾಡಿ, ದೇವಸ್ಥಾನಗಳು ಶ್ರದ್ಧಾ ಭಕ್ತಿಯ ಕೇಂದ್ರಗಳು. ದೇವರು ಗಾಳಿ ಇದ್ದಂತೆ. ನೋಡಲು ಸಾಧ್ಯವಿಲ್ಲ ಆದರೆ, ಅನುಭವಕ್ಕೆ ಬರಲಿದೆ. ಆದ್ದರಿಂದ, ಏಕಮನಸ್ಸಿನಿಂದ ಪ್ರಾರ್ಥಿಸಿದಲ್ಲಿ ದೇವರ ಸಾಕ್ಷತ್ಕಾರವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರೋಗ್ಯದ ಬಗ್ಗೆ ಜನರಿಗೆ ಆಸಕ್ತಿ ಇಲ್ಲ. ವ್ಯಸನದಿಂದ ಮಸಣಕ್ಕೆ ವಯಸ್ಸು ಮುಗಿಯುವ ಮುನ್ನ ಸಾಗುತ್ತಿದ್ದಾರೆ. ಆದ್ದರಿಂದ, ಆರೋಗ್ಯ ಕಾಪಾಡಿಕೊಳ್ಳುವ ಮೂಲಕ ವ್ಯಸನ ಮುಕ್ತಿಗೊಳಿಸಿಕೊಳ್ಳಿ. ಪರಸ್ಪರ ಪ್ರೀತಿ, ಅತಃಕರಣ ಬೆಳಸಿಕೊಳ್ಳುವ ಮೂಲಕ ಜೀವನವನ್ನು ಸಂತಷ್ಟುಗೊಳಿಸಿ ಎಂದರು.
ಕಿರಿಕೊಡ್ಲಿಮಠದ ಶ್ರೀ ಸದಾಶಿವ ಸ್ವಾಮಿಜಿ ಆಶೀರ್ವಚನ ನೀಡಿ, ಬಸವಣ್ಣನವರ ವಚನಗಳನ್ನು ಬದುಕಿನಲ್ಲಿ ಆಳವಡಿಸಿಕೊಂಡರೆ ಜೀವನ ಸುಂದರಗೊಳ್ಳಲಿದೆ. ಆದರೆ, ಇತ್ತೀಚಿನ ಜನರು ಬಹಿರಂಗ ಶುದ್ದಿಗೆ ಹೆಚ್ಚಿನ ಗಮನಕೊಟ್ಟು ಅಂತರಂಗ ಶುದ್ದಿಗೆ ಹೆಚ್ಚಿನ ಗಮನ ಕೊಡದಿರುವುದು ಮನುಷ್ಯ ಆಧೋಗತಿಗೆ ಇಳಿಯಲು ಕಾರಣ. ಏಕ ಧರ್ಮಗಳಿರುವ ದೇಶದಲ್ಲಿ ಜನರು ನೆಮ್ಮದಿಯಾಗಿಲ್ಲ. ಆದರಲ್ಲೂ ನಮ್ಮ ದೇಶದಲ್ಲಿ ನೂರಾರು ಸಮುದಾಯ, ಪಂಗಡಗಳಿದ್ದರೂ ದೇಶದಲ್ಲಿ ನೆಮ್ಮದಿಯ ಬದುಕು ನಡೆಸಲು ಮುಖ್ಯ ಕಾರಣ ಹಿರಿಯರು ಹಾಕಿಕೊಟ್ಟ ಸಂಸ್ಕಾರ, ಸಂಸ್ಕೃತಿ ಎಂದು ನುಡಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ಬಿ.ಆರ್.ಗುರುದೇವ್ ಮಾತನಾಡಿ, ಮಲೆನಾಡಿನ ಜನರಿಗೆ ಸಂಸ್ಕಾರ, ಸಂಸ್ಕೃತಿ ಕಲಿಸಿದ್ದು ಸಿದ್ಧಗಂಗಾ ಮಠ. ಗ್ರಾಮಗಳಲ್ಲಿ ದೇವಸ್ಥಾನ ನಿರ್ಮಾಣ ಮಾಡುವುದು ಮುಖ್ಯವಲ್ಲ, ನಿತ್ಯ ಪೂಜೆ ನಡೆಯುವುದು ಮುಖ್ಯ. ಇದರಿಂದ ಮಾತ್ರ ಗ್ರಾಮದ ಶ್ರೇಯೋಭಿವೃದ್ಧಿ ಸಾಧ್ಯ ಎಂದರು.
22 ವರ್ಷಗಳ ಬಳಿಕೆ ತಾಲೂಕಿನ ಹರಗರಹಳ್ಳಿ-ಬೊಮ್ಮನಕೆರೆ ಗ್ರಾಮದ ಶ್ರೀ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ಟ್ರಸ್ಟ್ ಹಮ್ಮಿಕೊಂಡಿದ್ದ ಮೂರು ದಿನಗಳ ನಂದೀಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಮಂಗಳವಾರ ಸಂಜೆ ಕೆಂಡದ ನಂತರ ಮುಕ್ತಾಯಗೊಂಡಿತು. ಅಂತಿಮ ದಿನ 101 ಕಳಸಗಳು, ಮಂಗಳವಾದ್ಯಗಳೊಂದಿಗೆ ಸ್ವಾಮೀಜಿಗಳನ್ನು ವೇದಿಕೆಗೆ ಕರೆತರಲಾಯಿತು. ಜಾತ್ರೆಯ ಮೂರು ದಿನಗಳ ಕಾಲ ಗ್ರಾಮದ 30 ಜನರ ತಂಡ ನಂದೀಶ್ವರ ವಿಗ್ರಹವನ್ನು ಭೂಸ್ಪರ್ಶ ಮಾಡದಂತೆ ಹೊತ್ತಿದ್ದು ವಿಶೇಷವಾಗಿತ್ತು. ಸಮಾಜ ಸೇವಕ ಅರೆಕೆರೆ ಪುನೀತ್ ಅನ್ನಸಂತರ್ಪಣೆ ನಡೆಸಿಕೊಟ್ಟರು.
ವಡ್ಡರಹಳ್ಳಿ ಜಯಣ್ಣ, ಗ್ರಾಪಂ ಸದಸ್ಯ ರೇಣುಕಾ,ರೋಷನ್,ಹರಗರಹಳ್ಳಿಸುದರ್ಶನ್ ಮುಂತಾದವರಿದ್ದರು.