ಜಿಲ್ಲೆ

ಸಂಸ್ಕಾರ ಕಲಿಸಿದರೆ ಮಹನೀಯರನ್ನು ಕಾಣಬಹುದು: ಶಂಭುನಾಥ ಶ್ರೀ

ಹಾಸನ: ಬಾಲ್ಯದಲ್ಲಿಯೇ ಮಕ್ಕಳಿಗೆ ಸಂಸ್ಕಾರ ಕಲಿಸಿದರೆ ಪ್ರತಿ ಮನೆಯಲ್ಲೂ ಮಹನೀಯರನ್ನು ಕಾಣಬಹುದು ಎಂದು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಹಾಸನ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.
ನಗರದ ಎಂ.ಜಿ ರಸ್ತೆಯ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಶನಿವಾರ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀ ಕೃಷ್ಣ ಜನಾಷ್ಠಮಿ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಆರ್ಶೀವಚನ ನೀಡಿದ ಶ್ರೀಗಳು, ಗುರು, ತಂದೆ-ತಾಯಿ ಕಲಿಸಿದ ಸಂಸ್ಕಾರ ಪ್ರತಿಯೊಬ್ಬ ವ್ಯಕ್ತಿ ಬಾಳಿ ಬದುಕಿ ಮಣ್ಣು ಸೇರುವವರೆಗೂ ಇರುತ್ತದೆ. ಸಂಸ್ಕಾರ ಇಲ್ಲದ ಬದುಕು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯಲಾರದು. ಹಾಗಾಗಿ ಪ್ರತಿಯೊಬ್ಬರ ಬದುಕಿನಲ್ಲಿ ಸಂಸ್ಕಾರ ಅಗತ್ಯ. ಸಂಸ್ಕಾರವಂತರು ಈ ಸಮಾಜವನ್ನು ಸರಿ ದಾರಿಯಲ್ಲಿ ಕೊಂಡೊಯ್ಯುವರು ಎಂದರು.
ಕೃಷ್ಣನಿಗೆ ತಾಯಿ ಯಶೋಧೆ, ರಾಮನಿಗೆ ತಾಯಿ ಕೌಸಲ್ಯಾ ಕಲಿಸಿದ ಸಂಸ್ಕಾರ ಇಬ್ಬರನ್ನು ಮಹಾ ದೈವಿಪುರುಷರನ್ನಾಗಿಸಿತು. ಅಂತೆಯೇ ನಾವು ನಮ್ಮ ಮಕ್ಕಳಿಗೆ ಕಲಿಸುವ ಸಂಸ್ಕಾರ ಅವರನ್ನು ಕುಟುಂಬದ ಆಸ್ತಿಯಲ್ಲ ಸಮಾಜದ ಆಸ್ತಿಯನ್ನಾಗಿಸುತ್ತದೆ ಎಂಬುದನ್ನು ಪೋಷಕರು ಮರೆಯಬಾರದು. ಭಗವಾನ್ ಶ್ರೀ ಕೃಷ್ಣ ಈ ಮನುಕುಲಕ್ಕೆ ಸಮಾಜಕ್ಕೆ ಸಾಕಷ್ಟು ಸಂದೇಶ ನೀಡಿದ್ದಾನೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಮಾತಿನ ಸಾರವನ್ನು ಇಡೀ ವಿಶ್ವಕ್ಕೆ ಸಾರಿದ್ದಾನೆ. ಕೃಷ್ಣ ಮಹಾಭಾರತದಲ್ಲಿ ಧರ್ಮದ ಪರವಾಗಿ ನಿಂತು ಇಡೀ ಮನುಕುಲಕ್ಕೆ ಧರ್ಮ ಪಾಲಿಸುವ ಸಂದೇಶ ನೀಡಿದ್ದಾನೆ. ಕೆಡುಕಾದ್ದನ್ನು ತಾನೇ ಧ್ವಂಸ ಮಾಡಿದ. ಇವೆಲ್ಲವನ್ನು ನಾವು ಅರಿಯಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಶಶಿಕುಮಾರ್ ಮಾತನಾಡಿ, ಮಹನೀಯರ ಆದರ್ಶವನ್ನು ನಾವೆಲ್ಲರೂ ಪಾಲಿಸಬೇಕು. ಆಗ ಮಾತ್ರ ನಮ್ಮ ಮುಂದಿನ ತಲೆಮಾರು ಅದನ್ನು ಅನುಸರಿಸುತ್ತದೆ. ಇಲ್ಲವಾದಲ್ಲಿ ಯುವ ಪೀಳಿಗೆಯನ್ನು ಸರಿ ದಾರಿಯನ್ನು ಕೊಂಡೊಯ್ಯುವುದು ಕಠಿಣವಾಗಲಿದೆ ಎಂದರು.
ನಮ್ಮ ನಡುವೆ ಬದುಕಿ ಮಾದರಿಯಾದಂತಹವರ ಜೀವನ ನಮಗೆ ಮಾದರಿಯಾಗಬೇಕು. ಅಬ್ದುಲ್ ಕಲಾಂ, ಮದರ್ ತೆರೇಸಾ,ಬಾಲಗಂಗಾಧರ ನಾಥ ಸ್ವಾಮೀಜಿಯವರು ಸೇರಿದಂತೆ ಹಲವು ಮಹನೀಯರು ನಮ್ಮ ಕಣ್ಣ ಮುಂದೆ ಸಾಧಿಸಿ ತೋರಿಸಿದವರು. ಸಮಾಜ ಹೋಗಬೇಕಾದ ಹಾದಿಯ ಬಗೆಗೆ ನಮ್ಮೆಲ್ಲರಿಗೂ ಅರಿವು ಮೂಡಿಸಿದವರು. ಇಂತಹವರ ಜೀವನ ನಮಗೆ ಮಾದರಿಯಾಗಬೇಕು. ಆಗ ಮಾತ್ರ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂದರು.
ಇದೇ ವೇಳೆ ಮಕ್ಕಳು ರಾಧೆ-ಕೃಷ್ಣರ ವೇಷ ಧರಿಸಿ ಕಂಗೊಳಿಸದರಲ್ಲದೆ, ಹಾಡಿ, ನಲಿದು ವೇದಿಕೆಯಲ್ಲಿ ವಿವಿಧ ನೃತ್ಯ ರೂಪಕ ಪ್ರಸ್ತುತ ಪಡಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾಧ್ಯಾಯ ದರ್ಶನ್, ಜಿಲ್ಲಾ ಕಸಾಪ ಗೌರ ಕಾರ್ಯದರ್ಶಿ ಬಿ.ಆರ್. ಬೊಮ್ಮೇಗೌಡ, ಶಾಲೆಯ ಸಿಬ್ಬಂದಿ ವರ್ಗ ಹಾಗೂ ಪೋಷಕಕರು ಹಾಜರಿದ್ದರು.