ಪಾಂಡವಪುರ: ಸರ್ಕಾರಕ್ಕೆ ರಾಜಧನ ವಂಚಿಸುತ್ತಿರುವವರ ಹೆಸರನ್ನು ಸಂಸದೆ ಸುಮಲತಾ ಅಂಬರೀಶ್ ಅವರು ತಾಕತ್ತಿದ್ದರೆ ಬಹಿರಂಗಪಡಿಸಲಿ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಸವಾಲು ಹಾಕಿದರು.
ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಅಡುಗೆಮನೆಯ ಉಗ್ರಾಣ ಕಟ್ಟಡವನ್ನು ಬುಧವಾರ ಉದ್ಘಾಟಿಸಿದ ಅವರು ಮಾತನಾಡಿ, ಸಂಸದರಿಗೆ ಗಣಿಗಾರಿಕೆ ವಿಚಾರ ಒಂದು ರಾಜಕೀಯ ಅಸ್ತ್ರವಾಗಿದೆ. ರಾಜಧನ ವಂಚಿಸುತ್ತಿರುವವರು ಯಾರು ಎಂದು ಅಂಕಿ-ಅಂಶ ನೀಡಲಿ. ಅದನ್ನು ಬಿಟ್ಟು ಜನ ಮೆಚ್ಚಿಸಿಕೊಳ್ಳುವ ರೀತಿಯಲ್ಲಿ ಮಾತನಾಡಿದರೆ ಪ್ರಯೋಜನವಿಲ್ಲ ಎಂದರು.
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಬ್ಯಾನರ್ ಕಟ್ಟುವ ಮೂಲಕ ಆರಂಭಗೊಂಡ ನಾಲ್ಕು ದಶಕದ ರಾಜಕೀಯ ಜೀವನದಲ್ಲಿ ಒಂದು ಕಪ್ಪು ಚುಕ್ಕಿ ಇಲ್ಲದಂತೆ ಕೆಲಸ ಮಾಡಿದ್ದೇನೆ. ನಾವು ಮಾತಿನಲ್ಲಿ ಮೋಡಿ ಮಾಡುತ್ತಿಲ್ಲ. ಕ್ಷೇತ್ರದ ಕೆಲಸ ಮತ್ತು ಅಭಿವೃದ್ಧಿ ಮೂಲಕ ಮೋಡಿ ಮಾಡುತ್ತಿದ್ದೇವೆ. ಯಾರು ಏನೂ ಎಂಬುದು ಜಿಲ್ಲೆಯ ಜನತೆಗೆ ಗೊತ್ತಿದೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ವಿಚಾರಕ್ಕೆ ಕೈ ಹಾಕಿದರು ಏನೂ ಪ್ರಯೋಜನವಾಗಲಿಲ್ಲ. ಈಗ ಈ ರೀತಿ ಹೇಳಿಕೊಂಡು ರಾಜಕಾರಣ ಮಾಡುತ್ತಿದ್ದಾರೆ. ಯಾರು, ಯಾರನ್ನು ಟಾರ್ಗೆಟ್ ಮಾಡಲು ಸಾಧ್ಯವಿಲ್ಲ. ಜನ ಟಾರ್ಗೆಟ್ ಮಾಡಬೇಕಷ್ಟೆ. ಚುನಾವಣೆಗೆ ಬರಲಿ, ಯಾರ‌್ಯಾರು ಏನಾಗುತ್ತಾರೆ ಎಂಬುದನ್ನು ಜನ ನಿರ್ಧರಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಟಿಎಪಿಸಿಎಂಎಸ್ ಅಧ್ಯಕ್ಷ, ಉಪಾಧ್ಯಕ್ಷರಾದಿಯಾಗಿ ಸಂಘದ ಎಲ್ಲ ನಿರ್ದೇಶಕರು ಒಗ್ಗೂಡಿ ಉತ್ತಮವಾಗಿ ಕೆಲಸ ಮಾಡುತ್ತಿದ್ದಾರೆ ಎಂಬುದಕ್ಕೆ ಸಂಘ ಕೈಗೊಂಡಿರುವ ಅಭಿವೃದ್ಧಿ ಕೆಲಸಗಳೇ ಸಾಕ್ಷಿಯಾಗಿದೆ. ಟಿಎಪಿಸಿಎಂಎಸ್ ಕಲ್ಯಾಣ ಮಂಟಪದಲ್ಲಿ ಮದುವೆ ಮಾಡುವವರ ಅನುಕೂಲಕ್ಕಾಗಿ ಹೆಚ್ಚುವರಿ ಉಗ್ರಾಣ ನಿರ್ಮಾಣ ಮಾಡಲಾಗಿದೆ ಎಂದರು.
ಟಿಎಪಿಸಿಎಂಎಸ್ ಅಧ್ಯಕ್ಷ ಡಿ.ಶ್ರೀನಿವಾಸ್, ಉಪಾಧ್ಯಕ್ಷೆ ತಿಬ್ಬಮ್ಮ, ಕಾರ್ಯದರ್ಶಿ ನವೀನ್, ನಿರ್ದೇಶಕರಾದ ರಾಮಕೃಷ್ಣೇಗೌಡ, ಕಣಿವೆ ಯೋಗೇಶ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಗುರುಸ್ವಾಮಿ, ಚೆಲುವರಾಜು ಇತರರು ಇದ್ದರು.