ಜಿಲ್ಲೆ

ಸಂಸದರ ವಿರುದ್ಧ ಅಸೂಯೆ ಹೇಳಿಕೆ

ಮೈಸೂರು: ಮೈಸೂರು-ಬೆಂಗಳೂರು ಹೆದ್ದಾರಿಗೆ ‘ಕಾವೇರಿ’ ಹೆಸರು ಸೂಚಿಸಿರುವ ಸಂಸದ ಪ್ರತಾಪ್ ಸಿಂಹ ವಿರುದ್ಧ ಮೈಲ್ಯಾಕ್ ಅಧ್ಯಕ್ಷ ಕೌಟಿಲ್ಯ ರಘು ರಾಜಕೀಯ ಅಸೂಯೆಯಿಂದ ಹೇಳಿಕೆ ನೀಡಿದ್ದು, ಅದನ್ನು ನಿರ್ಲಕ್ಷೃ ಮಾಡಬೇಕು ಎಂದು ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ.ಕಾ. ಪ್ರೇಮ್ ಕುಮಾರ್ ಹೇಳಿದರು.

ಬಿಜೆಪಿ ಸರ್ಕಾರದಿಂದ ಕ್ಯಾಬಿನೆಟ್ ದರ್ಜೆಯ ಸ್ಥಾನಮಾನ ಪಡೆದಿರುವ ರಘು, ಪಕ್ಷದ ವೇದಿಕೆಯಲ್ಲಿ ಅದನ್ನು ಚರ್ಚಿಸುವುದನ್ನು ಬಿಟ್ಟು ಮಾಧ್ಯಮಕ್ಕೆ ಬಂದಿರುವುದು ಸರಿಯಲ್ಲ. ಬಹುಶಃ ಅವರ ಗುರು ಎಂಎಲ್ಸಿ ಎಚ್.ವಿಶ್ವನಾಥ್ ಧ್ವನಿ ಇವರ ಬಾಯಿಯ ಮೂಲಕ ಹೊರಹೊಮ್ಮಿದೆ ಎಂದು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಕುಟುಕಿದರು.

ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಕೌಟಿಲ್ಯ ರಘು ಅದೇ ಪಕ್ಷದಲ್ಲಿದ್ದರು. ಅವರ ಆಪ್ತರಾದ ವಿಶ್ವನಾಥ್ ಮಂತ್ರಿಯಾಗಿದ್ದರು. ಅಂದಿನಿಂದ ಕೆ.ಆರ್.ವೃತ್ತಕ್ಕೆ ಮಾತ್ರ ನಾಲ್ವಡಿ ಅವರ ಹೆಸರಿತ್ತು. ಬೇರೆ ಯಾವುದೇ ಪ್ರಮುಖ ಯೋಜನೆಗಳಿಗೆ ಒಡೆಯರ್ ಕುಟುಂಬದ ಹೆಸರನ್ನು ಇಟ್ಟಿರಲಿಲ್ಲ. ನಾಲ್ವಡಿ ಹೆಸರನ್ನು ಪ್ರಮುಖ ಯೋಜನೆಗಳಿಗೆ ನಾಮಕರಣ ಮಾಡಿಸಲು ರಘು ಏಕೆ ಪ್ರಯತ್ನ ಮಾಡಲಿಲ್ಲ? ಸಿದ್ದರಾಮಯ್ಯ ಸರ್ಕಾರ ಮಹಾರಾಜರ ಆಸ್ತಿಯನ್ನು ವಶಕ್ಕೆ ಪಡೆಯಲು ಯತ್ನಿಸಿದಾಗಲೂ ಇವರು ಕಾಂಗ್ರೆಸ್‌ನಲ್ಲೇ ಇದ್ದರೂ ಬಾಯಿಯನ್ನೇ ಬಿಟ್ಟಿರಲಿಲ್ಲ. ಈಗ ಬಿಜೆಪಿಯಿಂದ 2 ಬಾರಿ ವಿಧಾನ ಪರಿಷತ್ ಟಿಕೆಟ್ ಪಡೆದು, 2 ಬಾರಿ ನಿಗಮ-ಮಂಡಳಿ ಅಧ್ಯಕ್ಷರಾಗಿ ಕಾಂಗ್ರೆಸ್ ವಕ್ತಾರರಂತೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದರು.

ಮೈಸೂರು-ಬೆಂಗಳೂರು ಹೆದ್ದಾರಿಗೆ ‘ಕಾವೇರಿ’ ಹೆಸರು ಇಡುವುದು ಸೂಕ್ತವಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ಪೂಜ್ಯನೀಯ ಸ್ಥಾನ ನೀಡಲಾಗಿದೆ. ಈಗಾಗಲೇ ಅನೇಕ ನದಿಗಳ ಹೆಸರಿನಲ್ಲಿ ಹಲವೆಡೆ ಹೆದ್ದಾರಿಗಳಿವೆ. ಈ ಪದ್ಧತಿ ಕರ್ನಾಟಕದಲ್ಲೂ ಕಾವೇರಿ ಎಕ್ಸ್‌ಪ್ರೆಸ್ ವೇ ಮೂಲಕ ಮುಂದುವರಿಯಲಿ ಎಂದು ಆಗ್ರಹಿಸಿದರು

ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರು ನಾಲ್ವಡಿ ಹೆಸರನ್ನು ಸೂಚಿಸಿದ್ದಾರೆಯೇ ಹೊರತು ಕಾವೇರಿ ಹೆಸರನ್ನು ವಿರೋಧಿಸಿಲ್ಲ ಎಂದರು.