ಜಿಲ್ಲೆ

ಸಂಸದರ ನಿಧಿ ಶೇ.100 ಬಳಕೆ, ಸಂಸದ ಬಿ.ಎನ್. ಬಚ್ಚೇಗೌಡ ಮಾಹಿತಿ, ಹೊಸಕೋಟೆ ಆಸ್ಪತ್ರೆಗೆ ಆಂಬುಲೆನ್ಸ್ ಕೊಡುಗೆ

ಹೊಸಕೋಟೆ: ಸಂಸದರ ನಿಧಿಯನ್ನು ಶೇ.100 ಬಳಕೆ ಮಾಡಿದ್ದು, ಕ್ಷೇತ್ರದ ಅಭಿವೃದ್ಧಿಗೆ ಅನುದಾನವನ್ನು ಸಂಪೂರ್ಣವಾಗಿ ಬಳಸಿಕೊಳ್ಳಲಾಗಿದೆ ಎಂದು ಸಂಸದ ಬಿ.ಎನ್. ಬಚ್ಚೇಗೌಡ ತಿಳಿಸಿದರು.

ನಗರದ ಸರ್ಕಾರಿ ಆಸ್ಪತ್ರೆಗೆ ಬುಧವಾರ ಸಂಸದರ ನಿಧಿಯಿಂದ 20 ಲಕ್ಷ ರೂ. ವೆಚ್ಚದಲ್ಲಿ ಉಚಿತ ಆಂಬುಲೆನ್ಸ್ ಸೇವೆಗೆ ಹಸಿರು ನಿಶಾನೆ ತೋರಿ ಮಾತನಾಡಿದರು. ಹೊಸಕೋಟೆ ತಾಲೂಕು ಆಸ್ಪತ್ರೆಗೆ ಆಂಬುಲೆನ್ಸ್‌ಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ತಿಪ್ಪೇಗೌಡ ಮನವಿ ಮೇರೆಗೆ ನೂತನ ವಾಹನ ನೀಡಲಾಗಿದೆ ಎಂದರು.

ರಸ್ತೆ ಅಭಿವೃದ್ಧಿಗೆ ಒತ್ತು: ಕ್ಷೇತ್ರ ವ್ಯಾಪ್ತಿಯಲ್ಲಿ 20-21ನೇ ಸಾಲಿನಲ್ಲಿ ಪ್ರಧಾನ ಮಂತ್ರಿಗಳ ಗ್ರಾಮ ಸಡಕ್ ಯೋಜನೆಯಲ್ಲಿ ಒಟ್ಟು 2,49 ಕಿಲೋ ಮೀಟರ್ ರಸ್ತೆಯನ್ನು 1,73 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸಂಸದರ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಲ್ಲಿ ಎರಡು ವರ್ಷಗಳಿಂದ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ನೂರಕ್ಕೂ ಹೆಚ್ಚು ಕಾಮಗಾರಿ ಕೈಗೊಂಡಿದ್ದು, ಸುಮಾರು 6.75 ಕೋಟಿ ರೂ. ವೆಚ್ಚಮಾಡಲಾಗಿದೆ. ಎರಡು ವರ್ಷಗಳಲ್ಲಿ ಸಂಸದರ ನಿಧಿಯನ್ನು ಪ್ರಧಾನ ಮಂತ್ರಿಗಳ ಕೋವಿಡ್-19 ನಿರ್ವಹಣೆಗೆ ತೆಗೆದುಕೊಳ್ಳಲಾಗಿತ್ತು ಎಂದು ಸಂಸದರು ಮಾಹಿತಿ ನೀಡಿದರು.

ಕೋವಿಡ್ ಸಮಯದಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಆಸ್ಪತ್ರೆಗಳಿಗೆ ತಲಾ 25 ಲಕ್ಷ ರೂ. ಮೊತ್ತದ ವೈದಕೀಯ ಪರಿಕರ ನೀಡಲಾಗಿದೆ. ಸ್ವಂತ ಹಣದಿಂದ ಎರಡೂ ಜಿಲ್ಲೆಗಳಿಗೆ 50 ಲಕ್ಷ ರೂ. ಮೊತ್ತದ ವೈದಕೀಯ ಉಪಕರಣ ಹಾಗೂ ಔಷಧ ನೀಡಲಾಗಿದೆ ಎಂದರು.

ಪ್ರಧಾನ ಮಂತ್ರಿ ಆದರ್ಶ ಗ್ರಾಮ ಯೋಜನೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2018-19ನೇ ಸಾಲು ಮತ್ತು 19-20ನೇ ಸಾಲಿನಲ್ಲಿ 19 ಗ್ರಾಮಗಳನ್ನು ಆಯ್ಕೆ ಮಾಡಿಕೊಂಡಿದ್ದು, ಪ್ರತಿ ಗ್ರಾಮಕ್ಕೆ ತಲಾ 40 ಲಕ್ಷದಂತೆ 7.6 ಕೋಟಿ ರೂ. ಮತ್ತು ಎರಡನೇ ಹಂತದಲ್ಲಿ ಆಯ್ಕೆ ಮಾಡಲಾಗಿರುವ 22 ಗ್ರಾಮಗಳಿಗೆ ತಲಾ 20 ಲಕ್ಷದಂತೆ 4.4 ಕೋಟಿ ರೂ. ಮಂಜೂರಾಗಿದೆ. ಲೋಕಸಭಾ ಕ್ಷೇತ್ರದಲ್ಲಿ 83 ಗ್ರಾಮ ಆಯ್ಕೆ ಮಾಡಿಕೊಂಡು 23 ಕೋಟಿ ರೂ. ಮಂಜೂರುಮಾಡಿಸಲಾಗಿದೆ ಎಂದರು.

ಸಂಸದರ ಆದರ್ಶ ಗ್ರಾಮ ಯೋಜನೆಯಲ್ಲಿ ಕಳೆದ ವರ್ಷ ನಂದಗುಡಿ ಹೋಬಳಿಯ ನೆಲವಾಗಿಲು ಗ್ರಾಪಂ ಹಾಗೂ ಈ ವರ್ಷ ಅನುಗೊಂಡನಹಳ್ಳಿ ಹೋಬಳಿ ಗಣಗಲೂರು ಗ್ರಾಪಂ ಆಯ್ಕೆ ಮಾಡಿಕೊಂಡು ಎರಡೂ ಪಂಚಾಯಿತಿಗಳಲ್ಲಿ ವಿವಿಧ ಮೂಲಗಳಿಂದ ಕ್ರೋಡೀಕರಿಸಿದ ಅನುದಾನದಿಂದ ಅಭಿವೃದ್ಧಿ ಕಾಮಗಾರಿ ಮಾಡಲಾಗುತ್ತಿದೆ ಎಂದರು.

ಆಸ್ಪತ್ರೆಯ ವೈದ್ಯಾಧಿಕಾರಿ ಡಾ, ಸತೀಶ್, ಮುಖಂಡರಾದ ಬೈರೇಗೌಡ, ಲಕ್ಷ್ಮಣಗೌಡ, ಡಾ.ಎಚ್.ಎಂ. ಸುಬ್ಬರಾಜು, ಡಿ.ಎಸ್. ರಾಜಕುಮಾರ್, ಡಿ.ಟಿ. ವೆಂಕಟೇಶ್, ಗೋಪಾಲ್, ಕ್ಯಾಸೆಟ್ ನಾಗರಾಜ್, ರೋಟರಿ ಅಧ್ಯಕ್ಷ ವಿಜಯ್ ಕುಮಾರ್ ಇದ್ದರು.