ಜಿಲ್ಲೆ

ಸಂಸದರ ಅಮಾನತು ವಿರುದ್ಧ ಕೈ ಆಕ್ರೋಶ

ಚಿತ್ರದುರ್ಗ: ಸಂಸತ್‌ನಲ್ಲಿ ವಿರೋಧ ಪಕ್ಷದ 141 ಸಂಸದರನ್ನು ಅಮಾನತುಗೊಳಿಸಿರುವ ಕ್ರಮ ವಿರೋಧಿಸಿ ಕಾಂಗ್ರೆಸ್ ಜಿಲ್ಲಾ ಘಟಕದ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಪ್ರಜಾಪ್ರಭುತ್ವ ಕಗ್ಗೊಲೆ ಎಂದು ಆರೋಪಿಸಿ ಆಕ್ರೋಶ ಹೊರಹಾಕಿದರು.

ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಪಾರ್ಲಿಮೆಂಟ್ ಪ್ರಜಾಪ್ರಭುತ್ವದ ಪವಿತ್ರ ಮಂದಿರ. ಆದರೆ, ಬಿಜೆಪಿ ಸಂಸದ ಪ್ರತಾಪ್‌ಸಿಂಹ ಅವರಿಂದ ಪಾಸ್ ಪಡೆದು ಸಂಸತ್‌ನೊಳಗೆ ನುಗ್ಗಿ, ಕೆಲವರು ಹೊಗೆ ಬಾಂಬ್ ಸಿಡಿಸಿರುವುದು ಒಂದೆಡೆ ದುರಂತ. ಮತ್ತೊಂದೆಡೆ ಧರ್ಮ-ಧರ್ಮಗಳ ನಡುವೆ ಸಂಘರ್ಷ ಸೃಷ್ಟಿಸಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ ಪ್ರಜಾತಂತ್ರದ ಮೇಲೆ ನಂಬಿಕೆ ಇಲ್ಲ. ಹೀಗಾಗಿ ಸರ್ವಾಧಿಕಾರ ಧೋರಣೆ ಮುಂದುವರಿದಿರುವುದಕ್ಕೆ ಸಂಸದರ ಅಮಾನತ್ತು ಉತ್ತಮ ನಿದರ್ಶನ ಎಂದು ಕಿಡಿಕಾರಿದರು.

ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ಭದ್ರತಾ ಲೋಪ ವಿರೋಧಿಸಿ ನ್ಯಾಯ ಕೇಳಿದ ಸಂಸದರನ್ನು ಹೊರಗಟ್ಟುವ ಕೆಲಸ ಬಿಜೆಪಿ ಮಾಡಿದೆ. ಸಂಸತ್‌ಗೆ ರಕ್ಷಣೆ ನೀಡದವರು, ಜನಸಾಮಾನ್ಯರಿಗೆ ಯಾವ ರೀತಿ ರಕ್ಷಣೆ ಕೊಡಬಲ್ಲರು ಎಂಬುದನ್ನು ಜನರೇ ಅರ್ಥ ಮಾಡಿಕೊಳ್ಳಬೇಕು. ಸಂಸದರ ಅಮಾನತು ಹಿಂಪಡೆದು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಂ.ಕೆ.ತಾಜ್‌ಪೀರ್, ಮಹಿಳಾ ಜಿಲ್ಲಾಧ್ಯಕ್ಷೆ ಗೀತಾನಂದಿನಿ ಗೌಡ, ಮುಖಂಡರಾದ ಕೆ.ಸಿ.ನಾಗರಾಜ್‌, ಮೋಕ್ಷಾ ರುದ್ರಸ್ವಾಮಿ, ಜಿ.ಎಸ್.ಮಂಜುನಾಥ್, ಕೆ.ಎಂ.ಹಾಲಸ್ವಾಮಿ, ಕೆ.ಪಿ.ಸಂಪತ್‌ಕುಮಾರ್, ತಿಪ್ಪೇಸ್ವಾಮಿ, ಡಿ.ಎನ್.ಮೈಲಾರಪ್ಪ, ಎನ್.ಡಿ.ಕುಮಾರ್, ಎಸ್.ಎನ್.ರವಿಕುಮಾರ್, ಶಿವಲಿಂಗಪ್ಪ, ಮೋಹನ್ ಪೂಜಾರಿ, ಮುನಿರಾ ಮಕಾಂದಾರ್ ಇತರರಿದ್ದರು.