ಚಾಮರಾಜನಗರ: ಜಿಲ್ಲೆಯಲ್ಲಿ ನಿಯಮಾನುಸಾರ ಗಣಿಗಾರಿಕೆಗೆ ಅವಕಾಶ ನೀಡಬೇಕು, ಗಣಿಗಾರಿಕೆ ಲಾರಿಗಳನ್ನು ತಡೆಯುವ ಗ್ರಾಮಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಪೊಲೀಸರಿಗೆ ಸೂಚನೆ ನೀಡಿರುವ ಸಂಸದ ಸುನೀಲ್ ಬೋಸ್ ಅವರಿಗೆ ಕಾನೂನಿನ ಅರಿವಿಲ್ಲ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವಿಜಯ್ ಕುಮಾರ್ ಕಿಡಿಕಾರಿದರು.
ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿ 100 ಜಾನುವಾರುಗಳಿಗೆ 12 ಹೆಕ್ಟೇರ್ ಗೋಮಾಳವನ್ನು ಕಾಯ್ದಿರಿಸಬೇಕಿದೆ. ಹೆಗ್ಗೋಠಾರ ಗ್ರಾಮದಲ್ಲಿರುವ ಜಾನುವಾರುಗಳಿಗೆ 750 ಎಕರೆ ಗೋಮಾಳದ ಅಗತ್ಯವಿದೆ. ಈ ನಿಟ್ಟಿನಲ್ಲಿ ಗೋಮಾಳಗಳಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿರುವುದು ಕಾನೂನು ಬಾಹಿರವಾಗಿದೆ. ಆದರೆ ಸಂಸದ ಸುನೀಲ್‌ಬೋಸ್ ಅವರು ಕೆಡಿಪಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿ ಎಂದು ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ. ಇದು ಸಂಸದರಿಗೆ ಕಾನೂನಿನ ಅರಿವಿಲ್ಲ ಎಂಬುದನ್ನು ತೋರಿಸುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಜಿಲ್ಲೆಯಲ್ಲಿ ಗ್ರಾಮೀಣ ಭಾಗಕ್ಕೆ ಸೂಕ್ತ ರೀತಿಯಲ್ಲಿ ಬಸ್‌ಸೌಲಭ್ಯವಿಲ್ಲದೇ ವಿದ್ಯಾರ್ಥಿಗಳು ನಿತ್ಯವೂ ಪರದಾಡುವಂತಾಗಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಬಡಜನರು ಸಮಸ್ಯೆ ಅನುಭವಿಸುವಂತಾಗಿದೆ. ಇಂತಹ ನೂರಾರು ಸಮಸ್ಯೆಗಳು ಜಿಲ್ಲೆಯಲ್ಲಿ ತಾಂಡವವಾಡುತ್ತಿದೆ. ಆದರೇ ಸಂಸದರು ಜನಪರವಾದ ವಿಚಾರವನ್ನು ಹೊರತುಪಡಿಸಿ, ಗಣಿಗಾರಿಕೆ ಕುರಿತು ಮಾತನಾಡಿರುವುದು ಸೂಕ್ತವಲ್ಲ. ಸಂಸದರ ನಿರ್ದೇಶನದಂತೆ ಜಿಲ್ಲಾಡಳಿತ ಗೋಮಾಳದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದ್ದೇ ಆದರೇ, ನಿರಂತರ ಚಳುವಳಿ ರೂಪಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಹೆಗ್ಗೋಠಾರ ಗ್ರಾಮ ಗೌಡಿಕೆ ಮಾದಪ್ಪ ಮಾತನಾಡಿ, ನಮ್ಮ ಗ್ರಾಮವನ್ನು ಒಳಗೊಂಡಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರಗಳ ಸಂಖ್ಯೆ ಹೆಚ್ಚಾಗಿದೆ. ಸುತ್ತಲಿನ ಗೋಮಾಳ ಜಾನುವಾರುಗಳಿಗೆ ಅಗತ್ಯವಾಗಿದೆ. ಯಾವುದೇ ಕಾರಣಕ್ಕೂ ಗೋಮಾಳಗಳಲ್ಲಿ ಗಣಿಗಾರಿಕೆ ನಡೆಸಲು ಅವಕಾಶ ನೀಡಬಾರದು ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಬಸವಣ್ಣ, ಕಲ್ಪುರ ಮಾದಪ್ಪ, ಶಿವಲಿಂಗೇಗೌಡ, ಎಚ್.ವಿ.ಸ್ವಾಮಿ, ಮಹೇಶ್ ಕೆಲ್ಲಂಬಳ್ಳಿ ಹಾಜರಿದ್ದರು.