ಹಾಸನ: ತಂದೆ, ತಾತನ ಹೆಸರು ಹೇಳಿಕೊಂಡು ರಾಜಕೀಯ ಮಾಡುತ್ತಿರುವ ಸಂಸದ ಪ್ರಜ್ವಲ್ ರೇವಣ್ಣನಿಗೆ ರಾಜಕೀಯದ ಅನುಭವ ಕೊರತೆ ಎದ್ದು ತೋರುತ್ತಿದೆ. ಸರಿಯಾಗಿ ಅರ್ಜಿ ಹಾಕಲು ಬಾರದೆ ಸಂಸದ ಸ್ಥಾನದ ಅರ್ಹತೆ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಎ.ಗೋಪಾಲಸ್ವಾಮಿ ಲೇವಡಿ ಮಾಡಿದರು.
ಲೋಕಸಭೆ ಚುನಾವಣೆಗೆ ಸರಿಯಾಗಿ ಅರ್ಜಿ ಹಾಕಲು ಬಾರದ ನೀವು, ನನ್ನ ಕಾನೂನು ಅರಿವನ್ನು ಪ್ರಶ್ನೆ ಮಾಡಲು ಬರಬೇಡಿ, ಲೋಕಸಭಾ ಸದಸ್ಯನಾಗಲು ನಿಮಗೆ ಅರ್ಹತೆ ಇಲ್ಲ. ನೀವು ರಾಜಕೀಯ ಸಭೆ ಮಾಡುವುದಾದರೆ ಮಾಡಲಿ. ಅದನ್ನು ಬಿಟ್ಟು ಏನೂ ಅರಿವಿಲ್ಲದವನಂತೆ ಮಾತಾಡುವುದು ಸರಿಯಲ್ಲ. ನೀವೊಬ್ಬರು ವಿದ್ಯಾವಂತರಾಗಿ ಆ ರೀತಿಯ ಹೇಳಿಕೆ ಕೊಡಬಾರದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಾಲ್ಕೂವರೆ ವರ್ಷ ಕದ್ದು ಹೋಗಿ ನಿನ್ನೆ, ಮೊನ್ನೆ ಬಂದು ಓಡಾಡಿಕೊಂಡು ಈಗ ನನ್ನನ್ನು ಪ್ರಶ್ನೆ ಮಾಡುತ್ತಿದ್ದಾರೆ. ನಾನು ಯಾವತ್ತೂ ನಿಮ್ಮನ್ನು ಪ್ರಶ್ನೆ ಮಾಡಿಲ್ಲ. ನೀವು ಎಳಸಿದ್ದೀರಾ? ಈಗಲಾದರೂ ತಿದ್ದಿಕೊಳ್ಳಿ. ಹೈಕೋರ್ಟ್ ಸಂಸದ ಸ್ಥಾನ ಅನರ್ಹಗೊಳಿಸಿದ ನಂತರ ಸುಪ್ರೀಂಕೋರ್ಟ್‌ನಲ್ಲಿ ತಡೆಯಾಜ್ಞೆ ತಂದಿದ್ದಾರೆ. ಕಾನೂನಿನ ಅರಿವಿದ್ದಿದ್ದರೆ ನಾಮಪತ್ರ ಸಲ್ಲಿಸುವ ವೇಳೆ ತಪ್ಪು ಮಾಡುತ್ತಿರಲಿಲ್ಲ ಎಂದು ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದರು.
ಕಳೆದ ನಾಲ್ಕೂವರೆ ವರ್ಷ ಎಲ್ಲೂ ಬಂದಿರಲಿಲ್ಲ. ಅಧಿಕಾರಿಗಳ ಜತೆ ವೇದಿಕೆ ಮೇಲೆ ನಿಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರನ್ನು ಕೂರಿಸಿಕೊಂಡು ಸಭೆ ಮಾಡುತ್ತೀರಿ, ನಿಮಗೆ ಶಿಷ್ಟಾಚಾರದ ಬಗ್ಗೆ ಜ್ಞಾನ ಇದೆಯೇ ಎಂದು ಪ್ರಶ್ನಿಸಿದ ಅವರು, ನಿಮ್ಮ ಪಕ್ಷದ ಮುಖಂಡರ ಜತೆಗೆ ತಹಸೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಯನ್ನು ಕೂರಿಸಿಕೊಂಡು ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ. ಶಿಷ್ಟಾಚಾರ ಉಲ್ಲಂಘನೆ ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಿ ಎಂದು ಜಿಲ್ಲಾಧಿಕಾರಿಗೆ ದೂರು ನೀಡಿದ್ದೇನೆ. ಯಾರೊಂದಿಗೆ ಕುಂದುಕೊರತೆ ಸಭೆ ಮಾಡಬೇಕು ಎಂಬ ಕನಿಷ್ಠ ಅರಿವು ಅವರಿಗಿಲ್ಲ ಎಂದರು.
ನಾನು ಪರಿಷತ್ ಸದಸ್ಯನಾಗಿ ಕೆಲಸ ಮಾಡಿಲ್ಲ ಎಂಬ ಪ್ರಜ್ವಲ್ ಟೀಕೆಗೆ ಪ್ರತಿಕ್ರಿಯಿಸಿ, ಆರು ವರ್ಷ ನಾನು ಏನು ಮಾಡಿದ್ದೇನೆ ಎಂಬುದನ್ನು ಹಾಲಿ ಎಂಎಲ್‌ಸಿ ಡಾ.ಸೂರಜ್ ರೇವಣ್ಣ, ಅವರನ್ನು ಕೇಳಿದರೆ ಮಾಹಿತಿ ಸಿಗಲಿದೆ. ನಾನೂ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತವರು ಕ್ಷೇತ್ರ ಅನ್ನುವ ಕಾರಣಕ್ಕೆ ಚನ್ನರಾಯಪಟ್ಟಣಕ್ಕೆ ಸ್ವಲ್ಪ ಹೆಚ್ಚು ಅನುದಾನ ಕೊಟ್ಟಿರಬಹುದು ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಹಾಸನ ಕ್ಷೇತ್ರದಿಂದ ನಾನೂ ಟಿಕೆಟ್ ಆಕಾಂಕ್ಷಿ. ಡಿಸೆಂಬರ್ ಒಳಗೆ ಟಿಕೆಟ್ ನೀಡಿ ಎಂದು ಕೇಳಿದ್ದೇನೆ. ಬಾಗೂರು ಮಂಜೇಗೌಡರಿಗೆ ಕೊಟ್ಟರೂ ಸಂತೋಷ. ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಅವರು ಕಾಂಗ್ರೆಸ್‌ಗೆ ಬಂದರೆ ವೈಯಕ್ತಿಕವಾಗಿ ಸ್ವಾಗತ. ಈ ವಿಚಾರದಲ್ಲಿ ಪಕ್ಷ ಏನು ತೀರ್ಮಾನ ಕೈಗೊಳ್ಳುವುದೋ ಅದಕ್ಕೆ ಬದ್ಧ ಎಂದು ಹೇಳಿದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಘು ದಾಸರಕೊಪ್ಪಲು, ಮುಖಂಡರಾದ ಮಂಜೇಗೌಡ, ಮೋಹನ್ ಇದ್ದರು.