ಜಿಲ್ಲೆ

ಸಂಸದ ಡಾ.ರಾಧಾಕೃಷ್ಣಗೆ ಅಭಿನಂದನೆ ನಾಳೆ

ಚಿತ್ತಾಪುರ: ಸಂಸದರಾದ ಬಳಿಕ ಪ್ರಥಮ ಬಾರಿಗೆ ಪಟ್ಟಣಕ್ಕೆ ಶುಕ್ರವಾರ ಆಗಮಿಸಲಿರುವ ಡಾ.ರಾಧಾಕೃಷ್ಣ ದೊಡ್ಡಮನಿ ಅವರಿಗೆ ಬಜಾಜ್ ಕಲ್ಯಾಣ ಮಂಟಪದಲ್ಲಿ ಕಾಂಗ್ರೆಸ್‌ನಿAದ ಅದ್ದೂರಿ ಅಭಿನಂದನಾ ಸಮಾರಂಭ ಆಯೋಜಿಸಲಾಗಿದೆ ಎಂದು ಬ್ಲಾಕ್ ಅಧ್ಯಕ್ಷ ಭೀಮಣ್ಣ ಸಾಲಿ ಹೇಳಿದರು.

ಪಕ್ಷದ ಸ್ಥಳೀಯ ಕಚೇರಿಯಲ್ಲಿ ಬುಧವಾರ ಪೂರ್ವಭಾವಿ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ ಸಂಸದ ಡಾ.ರಾಧಾಕೃಷ್ಣ ದೊಡ್ಡಮನಿ ನಾಗಾವಿ ಯಲ್ಲಮ್ಮ ದೇವಸ್ಥಾನ ಮತ್ತು ಹಜರತ್ ಚಿತ್ತಾಶಾವಲಿ ದರ್ಗಾಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಬಸವೇಶ್ವರ ಮೂರ್ತಿಗೆ ಮಲಾರ್ಪಣೆ ಮಾಡಲಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯಸಿಂಗ್, ಶಾಸಕ ಎಂ.ವೈ. ಪಾಟೀಲ್ ಸೇರಿ ಜಿಲ್ಲೆಯ ಪಕ್ಷದ ಶಾಸಕರು, ಜನಪ್ರತಿನಿಧಿಗಳು, ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಪಟ್ಟಣದ ಚಿತ್ತಾಶಾವಲಿ ಚೌಕ್‌ನಿಂದ ಬೆಳಗ್ಗೆ 10ಕ್ಕೆ ಶುರುವಾಗುವ ಮೆರವಣಿಗೆ ಜನತಾ ಬಜಾರ್, ಭುವನೇಶ್ವರಿ ವೃತ್ತ, ಡಾ.ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮೂಲಕ ಬಜಾಜ್ ಕಲ್ಯಾಣ ಮಂಟಪವರೆಗೆ ನಡೆಯಲಿದೆ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಮೇಶ ಮರಗೋಳ, ಸದಸ್ಯ ನಾಗರೆಡ್ಡಿ ಪಾಟೀಲ್ ಕರದಾಳ, ವಾಡಿ ಬ್ಲಾಕ್ ಅಧ್ಯಕ್ಷ ಮಹಿಮೂದ್ ಸಾಹೇಬ್, ಪ್ರಮುಖರಾದ ವೀರಣ್ಣಗೌಡ ಪರಸರಡ್ಡಿ, ಮಲ್ಲಿಕಾರ್ಜುನ ಕಾಳಗಿ, ಮುಕ್ತಾರ್ ಪಟೇಲ್, ಪ್ರಕಾಶ ಕಮಕನೂರ, ಚಂದ್ರಶೇಖರ ಕಾಶಿ, ಶಿವರುದ್ರ ಭೀಣಿ, ಯಲ್ಲಾಲಿಂಗ ಪೂಜಾರಿ, ಬಸವರಾಜ ಚಿನಮಳ್ಳಿ, ಶಿವಾಜಿ ಕಾಶಿ, ನಜೀರ್ ಅಡಕಿ, ಸಲೀಂ ಸಾಬ್, ಜುಮ್ಮಣ್ಣ ಪೂಜಾರಿ, ಬಸವರಾಜ ಹೊಸಳ್ಳಿ, ಶ್ರೀನಿವಾಸರೆಡ್ಡಿ ಪಾಲಪ್, ಸಂಜಯ ಬುಳಕರ್ ಇದ್ದರು.