ಬಾಗಲಕೋಟೆಯಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಶಾಸಕ ಜೆ.ಟಿ.ಪಾಟೀಲ ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿದರು. 
ಜಿಲ್ಲೆ

ಸಂಸದ ಜಿಗಜಿಣಗಿ ಸಿಎಂ ಕ್ಷಮೆಯಾಚಿಸಬೇಕು

ಬಾಗಲಕೋಟೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹುಚ್ಚ ಎಂದಿರುವ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಕೂಡಲೇ ಸಿಎಂ ಕ್ಷಮೆ ಕೇಳಬೇಕು. ಇಲ್ಲವೇ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕು ಎಂದು ಬೀಳಗಿ ಶಾಸಕ ಜೆ.ಟಿ.ಪಾಟೀಲ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಹುಚ್ಚರಾಗಿದ್ದರೆ ಹದಿನಾಲ್ಕು ಬಜೆಟ್ ಮಂಡಿಸುತ್ತಿದ್ದರಾ? ರಾಜ್ಯದ ಅಭಿವೃದ್ಧಿ ದೃಷ್ಠಿಯಿಟ್ಟುಕೊಂಡು ಜನಪರ ನಿರ್ಣಯ ಕೈಗೊಳ್ಳುವ ರಾಜ್ಯದಲ್ಲಿ ಅತಿ ಹೆಚ್ಚು ಜನರ ಬೆಂಬಲ ಇರುವ ನಾಯಕರಾಗುತ್ತಿದ್ದರಾ ಎಂದು ಸಂಸದ ರಮೇಶ ಜಿಗಜಿಣಿಗಿಯವರ ಹೇಳಿಕೆಗೆ ತಿರುಗೇಟು ನೀಡಿದರು.

ಬೇಕಾಬಿಟ್ಟಿ ಹೇಳಿಕೆ ಕೊಡುವುದನ್ನು ನಿಲ್ಲಿಸಬೇಕು. ಬಿಜೆಪಿಯವರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸಲು ಹಾಗೂ ಸಿಎಂ ಬದಲಾವಣೆಗೆ ಹುನ್ನಾರ ನಡೆಸುತ್ತಿದ್ದಾರೆ. ಆಧಾರವನ್ನು ಇಟ್ಟುಕೊಳ್ಳದೇ ಹೋರಾಟ ಮಾಡುತ್ತಿದ್ದಾರೆ. ಅವರ ಕನಸು ಈಡೇರುವುದಿಲ್ಲ ಎಂದು ತಿಳಿಸಿದರು.

ಬುಡಾದ ಸದಸ್ಯನಾಗಿರುವ ನಾನು ಬಾಗಲಕೋಟೆ ಬುಡಾದಲ್ಲಿ ಯಾವುದೇ ಏಜೆಂಟರ್ ಹಾವಳಿ ಇರಬಾರದೆಂದು ಮೊದಲ ಸಭೆಯಲ್ಲಿ ಠರಾವು ಪಾಸ್ ಮಾಡಲಾಗಿದೆ. ಏಜೆಂಟರ್‌ನ್ನು ಹಿಡಿದುಕೊಂಡು ಬಂದರೆ ಅವರ ಕೆಲಸ ಮಾಡಬೇಡಿ ಎಂದು ಅಽಕಾರಿಗಳಿಗೆ ಸೂಚಿಸಲಾಗಿದೆ. ಯಾವುದೇ ರೊಕ್ಕದ ವ್ಯವಹಾರ ಇಲ್ಲದೇ ಏಜೆಂಟರನ್ನು ಬಿಟ್ಟು ನೇರವಾಗಿ ಬರುವ ಜನರ ಜಮೀನು ಎನ್‌ಎ ಮಾಡುವಾಗ ಸುಗಮವಾಗಿ ಕಾಗದ ಮಾಡಿಕೊಡಲು ಅಽಕಾರಿಗಳಿಗೆ ತಿಳಿಸಲಾಗಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಜಿ.ನಂಜಯ್ಯನಮಠ ಮಾತನಾಡಿ, ವಿಜಯಪುರ ಸಂಸದ ರಮೇಶ ಜಿಗಜಿಣಗಿ ಒಬ್ಬ ಸಜ್ಜನ ರಾಜಕಾರಣಿ. ಅವರು ಮಂತ್ರಿಯಾಗಿ ಸಿದ್ದರಾಮಯ್ಯನವರ ಜತೆ ಕೆಲಸ ಕೂಡ ಮಾಡಿದವರು ಇವತ್ತು ಮುಖ್ಯಮಂತ್ರಿಯವರನ್ನು ಹುಚ್ಚ ಎಂದು ಕರೆದಿದ್ದು ಖಂಡನೀಯ. ಸಿದ್ದರಾಮಯ್ಯ ಅವರೊಬ್ಬ ಬಡವರ, ಅಭಿವೃದ್ಧಿಪರ ನಾಯಕ ಎಂಬುದು ರಾಜ್ಯದ ಜನರು ಕೂಡ ಒಪ್ಪುತ್ತಾರೆ. ಆದರೆ, ಅವರ ಬಗ್ಗೆ ಮಾತನಾಡಿರುವ ಜಿಗಜಿಣಗಿಯವರು ತಮ್ಮ ಮಾತನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.

ಮುಖಂಡ ಶ್ರೀನಿವಾಸ ಬಳ್ಳಾರಿ ಇದ್ದರು.