ಜಿಲ್ಲೆ

ಸಂಸದ ಎಸ್. ಮುನಿಸ್ವಾಮಿಗೆ ಕರೊನಾ

ಶುಕ್ರವಾರ ಬಂಗಾರಪೇಟೆಯ ಬೋಡಗುರ್ಕಿ ಡೇರಿಯ ನೂತನ ಕಟ್ಟಡ, ಬಿಎಂಸಿ ಕೇಂದ್ರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಂಸದ ಎಸ್. ಮುನಿಸ್ವಾಮಿ ಮಧ್ಯಾಹ್ನ ಕೋಲಾರ ತಾಲೂಕಿನ ಗಾಜಲದಿನ್ನೆ ಅರಣ್ಯ ಅತಿಥಿಗೃಹದಲ್ಲಿ ಪಿಡಬ್ಲ್ಯುಡಿ ಅಧಿಕಾರಿಗಳ ಸಭೆ ನಡೆಸಿದ್ದಾರೆ. ಇದೀಗ ಸಂಸದರ ಪ್ರಥಮ, ದ್ವಿತೀಯ ಸಂಪರ್ಕದಲ್ಲಿದ್ದ ಪಕ್ಷದ ಕಾರ್ಯಕರ್ತರು, ಸಭೆ ಸಮಾರಂಭದಲ್ಲಿ ಜತೆಗಿದ್ದ ಮುಖಂಡರು, ಸಭೆಗಳಲ್ಲಿ ಅಧಿಕಾರಿಗಳಿಗೆ ಕರೊನಾ ಆತಂಕ ಮನೆ ಮಾಡಿದೆ.

ಸಂಸದರು ಬೆಂಗಳೂರಿನಲ್ಲಿ ವಾಸವಿದ್ದು, ಕೆಲ ದಿನಗಳಿಂದ ರಾಜಧಾನಿಯಲ್ಲಿ ಕರೊನಾ ಪ್ರಕರಣ ಹೆಚ್ಚುತ್ತಿರುವುದು ಒಂದೆಡೆಯಾದರೆ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದ ವೇಳೆ ಸೋಂಕು ಅಂಟಿಕೊಂಡಿರಬಹುದು.

ತಮಿಳುನಾಡಿನಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಸಂಬಂಧ ಮಿಲ್ಲುಪುರಂ ಜಿಲ್ಲೆಯ ತಿರುಕೊಯ್ಯೂರು ವಿಧಾನಸಭಾ ಕ್ಷೇತ್ರದ ಉಸ್ತುವಾರಿ ವಹಿಸಿಕೊಂಡಿರುವ ಸಂಸದರು ಮಾ 21ರಿಂದ 25ರವರೆಗೆ ಪ್ರಚಾರ ಕಾರ್ಯದಲ್ಲಿ ಪಾಲ್ಗೊಂಡು ವಾಪಸಾಗಿದ್ದರು.

ಕರೊನಾ ದೃಢಪಟ್ಟಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂಸದರು ತಮ್ಮ ಸಂಪರ್ಕಕ್ಕೆ ಬಂದವರು ಕರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅನಾರೋಗ್ಯದ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಕರೊನಾ ಪರೀಕ್ಷೆಗೆ ಒಳಪಟ್ಟಾಗ ಸೋಂಕು ಬಾಧಿಸಿರುವುದು ದೃಢಪಟ್ಟಿದೆ. ವೈದ್ಯರ ಸಲಹೆಯಂತೆ ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೋಂ ಕ್ವಾರಂಟೈನ್ ಆಗಿದ್ದಾರೆ.

ಸಂಸದ ಎಸ್.ಮುನಿಸ್ವಾಮಿ ಅವರಿಗೆ ಶನಿವಾರ ಕರೊನಾ ಪಾಸಿಟಿವ್ ದೃಢಪಟ್ಟಿದೆ.

ವಿಜಯವಾಣಿ ಸುದ್ದಿಜಾಲ ಕೋಲಾರ