ಹಾಸನ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಗಡೆ ಏಕವಚನದಲ್ಲಿ ಅವ್ಯಾಚ ಪದಗಳಿಂದ ನಿಂದಿಸಿರುವುದನ್ನು ಖಂಡಿಸಿ, ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಂಗಳವಾರ ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಉತ್ತರ ಕನ್ನಡದ ಸಂಸದ ಅನಂತ್ ಕುಮಾರ್ ಹೆಗ್ಗಡೆ ಸಿಎಂ ಸಿದ್ದರಾಮಯ್ಯ ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದರೆ ಅಲ್ಲದೆ ರಾಜ್ಯದ ಶಿರಸಿ, ಶ್ರೀರಂಗಪಟ್ಟಣ ಹಾಗೂ ಇತರೆ ಕಡೆ ಇರುವ ಮಸೀದಿಗಳನ್ನು ಕೆಡವಿ, ಮಂದಿರ ಕಟ್ಟುತ್ತೇವೆ ಹಾಗೂ ಸಂವಿಧಾನವನ್ನು ಬದಲು ಮಾಡುತ್ತೇವೆ ಎಂಬ ಉದ್ಧಟತನ ಹೇಳಿಕೆ ನೀಡಿರುವುದು ಖಂಡನೀಯ ಎಂದರು.
ಸಂಸದ ಅನಂತ್ ಕುಮಾರ್ ಹೆಗ್ಗಡೆ ಹೇಳಿಕೆಯನ್ನ ಸಮರ್ಥಿಸಿಕೊಳ್ಳುವುದರ ಜತೆಗೆ ಅವರಿಗೆ ಬೆಂಬಲಿಸುತ್ತಿರುವ ಬಿಜೆಪಿ ಪಕ್ಷದವರ ಸಂಸ್ಕೃತಿ ಏನೆಂಬುದು ಇಡೀ ರಾಜ್ಯದ ಜನರಿಗೆ ತಿಳಿದಿದೆ. ಅವರು ದೇಶ ಮತ್ತು ರಾಜ್ಯದ ದಲಿತರು ಮತ್ತು ಹಿಂದುಳಿದ ವರ್ಗದವರು ಹಾಗೂ ಅಲ್ಪಸಂಖ್ಯಾತರ ಮೇಲೆ ಗದಾಪ್ರಹಾರ ನಡೆಸುತ್ತಿರುವುದು ಮುಂದಿನ ದಿನಗಳಲ್ಲಿ ಅಶಾಂತಿಗೆ ಕಾರಣವಾಗುವ ಸಾಧ್ಯತೆಗಳಿದ್ದು, ಆದ್ದರಿಂದ ಸಂಸದನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಜುಗರದ ಹೇಳಿಕೆಯನ್ನು ಉಂಟು ಮಾಡಿ ರಾಜ್ಯದ ಜನರಿಗೆ ಅಪಮಹಾನ ಮಾಡಿದ್ದಾರೆ. ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಕ್ರಮ ಕೈಗೊಳ್ಳಲಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನಾಕಾರರು ಮನವಿಯನ್ನ ಜಿಲ್ಲಾಡಳಿತಕ್ಕೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಬನವಾಸೆ ರಂಗಸ್ವಾಮಿ, ದೇವರಾಜೇಗೌಡ, ಶ್ರೇಯಸ್ ಪಟೇಲ್, ತಾರಾ ಚಂದನ್ ಸೇರಿದಂತೆ ಇನ್ನಿತರರು ಇದ್ದರು.