ಜಿಲ್ಲೆ

ಸಂಸತ್‌ನಲ್ಲೇ ವಿರೋಧ ಪಕ್ಷದ ನಾಯಕರಿಲ್ಲ

ಚಿತ್ರದುರ್ಗ: ಸಂಸತ್‌ನಲ್ಲಿ ಈವರೆಗೂ ವಿರೋಧ ಪಕ್ಷದ ನಾಯರಿಲ್ಲದ ದುಸ್ಥಿತಿ ಇದ್ದು, ವಿಶ್ವದಲ್ಲೇ ಜನರ ಅಪಹಾಸ್ಯಕ್ಕೆ ಕಾಂಗ್ರೆಸ್ ಒಳಗಾಗಿದೆ ಎಂದು ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಟೀಕಿಸಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಐದಾರು ತಿಂಗಳು ಕಳೆದರೂ ಬಿಜೆಪಿಯಿಂದ ರಾಜ್ಯದಲ್ಲಿ ವಿರೋಧ ಪಕ್ಷ ನಾಯಕರ ಆಯ್ಕೆಯಾಗಿಲ್ಲವೆಂದು ಪದೇ ಪದೆ ಕಾಂಗ್ರೆಸ್ ದೂರುತ್ತಿದೆ. ಆದರೆ, ಕೇಂದ್ರದಲ್ಲಿ ತಮ್ಮ ಪಕ್ಷದ ಸ್ಥಿತಿ ಹೇಗಿದೆ ಎಂಬುದನ್ನೇ ಆ ಪಕ್ಷದ ರಾಜ್ಯ ನಾಯಕರು ಮರೆತಂತೆ ಕಾಣುತ್ತಿದೆ ಎಂದು ವ್ಯಂಗ್ಯವಾಡಿದರು.

ರೈತರು ತಮ್ಮ ಪಂಪ್‌ಸೆಟ್‌ಗಳಿಗೆ ನೂತನವಾಗಿ ವಿದ್ಯುತ್ ಪರಿವರ್ತಕ ಅಳವಡಿಸಿಕೊಳ್ಳಲು 4-5 ಲಕ್ಷಕ್ಕಿಂತಲೂ ಹೆಚ್ಚು ರೂ. ಖರ್ಚಾಗಲಿದೆ. ಸಣ್ಣ, ಅತಿ ಸಣ್ಣ ರೈತರಿಗಂತೂ ಇದು ಸಾಧ್ಯವಾಗದ ಮಾತು. ಈ ಹಿಂದಿನ ಯಾವ ಸರ್ಕಾರವೂ ಇಂತಹ ಕೆಟ್ಟ ನಿರ್ಧಾರ ಕೈಗೊಂಡಿಲ್ಲ. ಸಾಮಾಜಿಕ ನ್ಯಾಯದ ಪರವಿರುವ ಸಿದ್ದರಾಮಯ್ಯ ಅವರು ಇದಕ್ಕೆ ಹೇಗೆ ಒಪ್ಪಿಕೊಂಡರು ಎಂದು ಪ್ರಶ್ನಿಸಿದರು.

ಮಳೆ-ಬೆಳೆ ಇಲ್ಲದೆ, ರಾಜ್ಯ ಬರದಿಂದ ತತ್ತರಿಸಿದೆ. ಬರ-ನೆರೆ ಹಾವಳಿಯಂತ ಸ್ಥಿತಿ ಈ ಹಿಂದೆ ಎದುರಾದಾಗ ಹಿಂದಿನ ಮುಖ್ಯಮಂತ್ರಿಗಳಾಗಿದ್ದ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅಕ್ಟೋಬರ್ ತಿಂಗಳಲ್ಲೇ ಬರ ಪರಿಹಾರ ವಿತರಿಸಿರುವ ನಿದರ್ಶನಗಳಿವೆ. ಆನಂತರವೇ ಕೇಂದ್ರ ವಿತರಣೆಗೆ ಕ್ರಮವಹಿಸಿದೆ. ಆದರೆ, ಈಗಿನ ರಾಜ್ಯ ಸರ್ಕಾರ ನಯಾಪೈಸೆ ಈವರೆಗೂ ಬಿಡುಗಡೆ ಮಾಡಿಲ್ಲ ಎಂದು ಬೇಸರಿಸಿದರು.